ನವದೆಹಲಿ: ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮಲಗಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ನೂತನ ಸರ್ಕಾರ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.
ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿಯವರನ್ನು ನಿದ್ರಿಸಲೂ ನಾವು ಬಿಡುವುದಿಲ್ಲ. ರೈತರ ಸಾಲ ಮನ್ನಾ ಮಾಡುವಂತೆ ಸರ್ವ ಪಕ್ಷಗಳೂ ಒಗ್ಗೂಡಿ ಆಗ್ರಹ ಮಾಡಲಿವೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನಮಂತ್ರಿಗಳು ರೈತರ ಒಂದು ಪೈಸೆಯನ್ನೂ ಮನ್ನಾ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಜನರಿಗೆ ಸಾಕಷ್ಟು ಸುಳ್ಳುಗಳನ್ನೂ ಹೇಳಿದೆ. ರೈತರು, ಸಣ್ಣ ವ್ಯಾಪಾರಿಗಳನ್ನು ಲೂಟಿ ಮಾಡಿದೆ. ನೋಟು ನಿಷೇಧದ ಮೂಲಕ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಹಗರಣವನ್ನು ಸರ್ಕಾರ ಮಾಡಿದೆ.
ಚುನಾವಣಾ ಪ್ರಚಾರದ ವೇಳೆ ನಾವು ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೆವು. ಅಧಿಕಾರಕ್ಕೆ ಬಂದ 6 ಗಂಟೆಗಳಲ್ಲಿ ಎರಡು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ. ಶೀಘ್ರದಲ್ಲಿಯೇ ರಾಜಸ್ಥಾನದಲ್ಲಿಯೂ ರೈತರ ಸಾಲ ಮನ್ನಾ ಮಾಡಲಾಗುತ್ತದೆ. ಸರ್ಕಾರಕ್ಕೆ ರೈತರ ಧ್ವನಿ ಕೇಳುವಂತೆ ನಮ್ಮ ಪಕ್ಷ ಮಾಡುತ್ತದೆ. ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿ ವಿಶ್ರಮಿಸಲು ನಾವು ಬಿಡುವುದಿಲ್ಲ.
2019ರ ಕಾಂಗ್ರೆಸ್ ಪ್ರಣಾಳಿಕೆ ರೈತರ ಸಾಲಮನ್ನಾ ಕುರಿತಂತಾಗಿರಲಿದೆ. ಪ್ರಧಾನಿ ಮೋದಿ ರೈತರ ಸಾಲ ಮನ್ನಾ ಮಾಡದಿದ್ದರೆ, ಇಂದಿನ ಫಲಿತಾಂಶ 2019ರ ಲೋಕಸಭೆಯಲ್ಲಿ ಮರುಕಳಿಸಲಿದೆ ಇದು ನೂರಕ್ಕೆ ನೂರರಷ್ಟು ಸತ್ಯ ಎಂದರು.
ರಫೇಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸುವಂತೆ ನಾವು ಆಗ್ರಹಿಸಿದ್ದೆವು. ಈ ವೇಳೆ ಮೋದಿಯವರು ಈ ಬಗ್ಗೆ ಚರ್ಚೆಗೆ ಒಪ್ಪಿದ್ದರು. ಆದರೀಗ ಚರ್ಚೆಗೆ ಬರದೆ ಓಡಿಹೋಗುತ್ತಿದ್ದಾರೆ.
“Won’t Let PM Sleep Till He Waives Farm Loans,” Says Rahul Gandhi