ಬೆಳಗಾವಿ, ಡಿ.17- ಸಮ್ಮಿಶ್ರ ಸರ್ಕಾರದಲ್ಲಿ ಯಾರ ಮೇಲೂ ಒತ್ತಡ ಹಾಕುತ್ತಿಲ್ಲ. ಎಲ್ಲರೂ ಪರಸ್ಪರ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನಿಂದ ಕಾಂಗ್ರೆಸ್ ಶಾಸಕರಿಗೆ ಒತ್ತಡ ಹೇರಲಾಗುತ್ತಿದೆ ಎಂಬ ವಿಚಾರ ಸತ್ಯಕ್ಕೆ ದೂರವಾದದ್ದು, ಅದರಲ್ಲಿ ಉರುಳಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಒಂದು ವೇಳೆ ಅಸಮಾಧಾನಗಳಿದ್ದಾರೆ ಅವರು ಬಗೆಹರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದಲ್ಲಿ ಶಾಸಕರಿಗೆ ಯಾವುದೇ ರೀತಿಯ ಒತ್ತಡವಿಲ್ಲ. ಸಚಿವ ಸಂಪುಟ ವಿಸ್ತರಣೆ ವೇಳೆ ಯಾರು ಸಂಪುಟದಲ್ಲಿ ಇರಬೇಕು, ಯಾರು ಇರಬಾರದು ಎಂಬುದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ.ಕೆಲವರನ್ನು ಸಂಪುಟದಿಂದ ಕೈ ಬಿಟ್ಟರೆ ಏನೂ ಮಾಡಲು ಸಾಧ್ಯವಿಲ್ಲ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವಂತದ್ದು ಏನೂ ಇಲ್ಲ. ಸಂಪುಟದಲ್ಲಿ ಹೊಸ ಹಾಗೂ ಹಳೆ ರಕ್ತ ಇರಲಿ ಎಂದು ಅವರು ಹೇಳಿದರು.
ಉದ್ಯಮಿ ಅಂಬಾನಿ ಕುಟುಂಬದವರ ಮದುವೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೋಗಿರುವ ಬಗ್ಗೆ ಮಾತನಾಡಿದ ಅವರು, ಆತ್ಮೀಯತೆ, ವಿಶ್ವಾಸ ಇರುವುದರಿಂದ ಅವರನ್ನು ಮದುವೆಯಂತಹ ಸಮಾರಂಭಗಳಿಗೆ ಆಹ್ವಾನಿಸಿದ್ದಾರೆ.ಆ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಬೇಡ.ಸಂಬಂಧವೇ ಬೇರೆ, ರಾಜಕೀಯವೇ ಬೇರೆ ಎಂದರು.
ವಿರೋಧ ಪಕ್ಷದವರ ಮದುವೆಗೆ ಹೋಗುವುದು ಪ್ರೀತಿ, ವಿಶ್ವಾಸ ಇರುವುದಕ್ಕೆ ಅದರಲ್ಲಿ ತಪ್ಪೇನಿಲ್ಲ. ತಾವೂ ಮುಕೇಶ್ ಅಂಬಾನಿ ಮಗಳ ಮದುವೆಗೆ ಹೋಗಿದ್ದಾಗಿ ದೇಶಪಾಂಡೆ ತಿಳಿಸಿದರು.