ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯನ್ನಾಗಿ ಮಾಡಲು ಹೆಚ್ಚಿದ ಒತ್ತಾಯ

ಬೆಳಗಾವಿ, ಡಿ.17-ಮುಂಬೈ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿಯಾಗಿ ಘೋಷಣೆ ಮಾಡುವ ಮೂಲಕ ಮರಾಠಿಗರ ಪ್ರಾಬಲ್ಯ ಕೊನೆಗಾಣಿಸಬೇಕೆಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಸದಾ ಗಡಿ ವಿವಾದವನ್ನೇ ಮುಂದಿಟ್ಟುಕೊಂಡು ಕರ್ನಾಟಕದ ವಿರುದ್ಧ ಕತ್ತಿಮಸೆಯುವ ನೆರೆ ಮಹಾರಾಷ್ಟ್ರ ಮತ್ತು ಎಂಇಎಸ್‍ಗೆ ಕಡಿವಾಣ ಹಾಕಬೇಕಾದರೆ ಬೆಳಗಾವಿಯನ್ನು ರಾಜಧಾನಿಯನ್ನಾಗಿ ಘೋಷಣೆ ಮಾಡುವ ಮೂಲಕ ಇಲ್ಲಿನ ಜನತೆಯ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸುವತ್ತ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಮೂಲಕ ಎಂಇಎಸ್ ಮತ್ತು ಮಹಾರಾಷ್ಟ್ರಕ್ಕೆ ಕಠಿಣ ಸಂದೇಶವನ್ನು ರವಾನಿಸಿದಂತಾಗಿದೆ.ಇದೇ ರೀತಿ ಎರಡನೇ ರಾಜಧಾನಿಯನ್ನಾಗಿ ಘೋಷಣೆ ಮಾಡಿದರೆ ಗಡಿ ವಿವಾದಕ್ಕೆ ಶಾಶ್ವತ ಕಡಿವಾಣ ಬೀಳಲಿದೆ ಎಂಬುದು ಸ್ಥಳೀಯರ ವಾದ.

2006ರಲ್ಲಿ ಅಂದಿನ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊಟ್ಟ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದರು.

ಕರ್ನಾಟಕ ಯಾವಾಗಲು ನಿಮ್ಮ ಜತೆ ಇರುತ್ತದೆ ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂದೇಶದ ಮೂಲಕ ಗಡಿ ಕ್ಯಾತೆ ತೆಗೆಯುತ್ತಿದ್ದ ತಂಟೆಕೋರರಿಗೆ ಬಿಸಿ ಮುಟ್ಟಿಸಿದ್ದರು.

ಇದೀಗ ಬೆಳಗಾವಿಯನ್ನು ಎರಡನೇ ರಾಜಧಾನಿ ಮಾಡಿದರೆ ಇಲ್ಲಿನ ಜನತೆಯ ಬೇಡಿಕೆ ಈಡೇರುವುದಲ್ಲದೆ ಇನ್ನೆಂದೂ ಕೂಡ ಗಡಿ ವಿವಾದದ ಬಗ್ಗೆ ಎಂಇಎಸ್ ಕ್ಯಾತೆ ತೆಗೆಯಲು ಸಾಧ್ಯವೇ ಇಲ್ಲ ಎಂದು ಸಾಹಿತಿಗಳು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ.

ಈಗಾಗಲೇ ಚಳಿಗಾಲದ ಅಧಿವೇಶನ ಒಂದು ವಾರ ಮುಗಿದಿದ್ದು, ಇನ್ನು ಐದು ದಿನಗಳು ಮಾತ್ರ ಬಾಕಿ ಉಳಿದಿದೆ.ಕಡೆ ಪಕ್ಷ ಉಳಿದ ದಿನಗಳಲ್ಲಾದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಎಂದು ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಸಾಹಿತಿಗಳು, ಕನ್ನಡ ಪರ ಸಂಘಟನೆಗಳು, ಚಿಂತಕರು, ಬರಹಗಾರರು ಸೇರಿದಂತೆ ಅನೇಕರು ಮುಂದಿಟ್ಟಿದ್ದಾರೆ.

ಕೇವಲ ಭರವಸೆ ನೀಡಿದರೆ ಸಾಲದು, ಎಂಇಎಸ್‍ನ ಆಟಾಟೋಪಕ್ಕೆ ಕಡಿವಾಣ ಹಾಕಬೇಕಾದರೆ ಸರ್ಕಾರ ಇದನ್ನು ಕಾರ್ಯಗತಗೊಳಿಸಲೇಬೇಕು.ಈ ಅಧಿವೇಶನದಲ್ಲೇ ದಿಟ್ಟ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.

ಸುವರ್ಣಸೌಧದಲ್ಲಿ ವರ್ಷಪೂರ್ತಿ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಕೆಲವು ಪ್ರಮುಖ ಇಲಾಖೆಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು.ನೀರಾವರಿ, ಕಂದಾಯ, ಲೋಕೋಪಯೋಗಿ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳನ್ನು ವರ್ಗಾಯಿಸಿದರೆ ಸುವರ್ಣ ಸೌಧದಲ್ಲಿ ವರ್ಷ ಪೂರ್ತಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ.

ಕೇವಲ ವರ್ಷಕ್ಕೆ ಒಂದು ಬಾರಿ ಎರಡು ವಾರ ಅಧಿವೇಶನ ನಡೆಸಿದರೆ ಸುವರ್ಣ ಸೌಧದ ಸಾರ್ಥಕತೆ ಈಡೇರುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಬೆಳಗಾವಿಯ ಸುವರ್ಣ ಸೌಧದಲ್ಲಿ ವರ್ಷಪೂರ್ತಿ ಕೆಲಸ ಮಾಡುವಂತೆ ಕೆಲವು ಇಲಾಖೆಗಳನ್ನು ವರ್ಗಾವಣೆ ಮಾಡುವ ಆಶ್ವಾಸನೆಯನ್ನು ಸದನದಲ್ಲಿ ನೀಡಿದ್ದರು.

ವಿಶೇಷವಾಗಿ ಕೃಷ್ಣ ಮತ್ತು ಘಟಪ್ರಭಾ ನೀರಾವರಿ ಯೋಜನೆಗಳು ಸೇರಿದಂತೆ ಕೆಲವು ಇಲಾಖೆಗಳು ಇಲ್ಲಿಯೇ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದರು.ಆದರೆ, ಈ ಭರವಸೆ ಕಾಗದದ ಮೇಲೆ ಉಳಿದಿದೆಯೇ ಹೊರತು ಇದುವರೆಗೂ ಈಡೇರಿಲ್ಲ.

ಕೂಡಲೇ ಈ ಅಧಿವೇಶನದಲ್ಲೇ ಬೆಳಗಾವಿಯನ್ನು ಕರ್ನಾಟಕದ ಎರಡನೇ ರಾಜಧಾನಿ ಹಾಗೂ ಸುವರ್ಣ ಸೌಧದಲ್ಲಿ ವರ್ಷ ಪೂರ್ತಿ ನಿರ್ವಹಿಸುವಂತೆ ಇಲಾಖೆಗಳನ್ನು ವರ್ಗಾವಣೆ ಮಾಡುವ ಐತಿಹಾಸಿಕ ನಿರ್ಧಾರವನ್ನು ಘೋಷಣೆ ಮಾಡಬೇಕು ಎಂಬುದು ಈ ಭಾಗದ ಜನರ ಒತ್ತಾಸೆ.
ಗುರುವಾರ ಸದನದಲ್ಲಿ ಉತ್ತರ ನೀಡುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಬೇಡಿಕೆಗೆ ಉತ್ತರ ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ