ಮೈಸೂರು: ಸುಳ್ವಾಡಿಯ ಮಾರಮ್ಮ ದೇವರ ಪ್ರಸಾದ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದ್ದು, ಆಹಾರದಲ್ಲಿ ಸೇರಿರುವ ವಿಷ ಮೋನೋ ಕ್ರೋಟೋಫಾಸ್ ಕ್ರಿಮಿ ನಾಶಕ ಇರಬಹುದು ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ತಿಳಿಸಿದ್ದಾರೆ.
ಪ್ರಸಾದ ಸೇವಿಸಿದ ಅಸ್ವಸ್ಥರು ಮೈಸೂರಿನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 104 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇವರಲ್ಲಿ 28 ಮಂದಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಲಿಬಾಯಿ ಎಂಬುವವರು ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು, ಈವರೆಗೆ ಸಾವನ್ನಪ್ಪಿರುವ ಸಂಖ್ಯೆ 14ಕ್ಕೆ ತಲುಪಿದೆ. ಇವರ ಗಂಡ ಮೊನ್ನೆಯಷ್ಟೆ ಸಾವನ್ನಪ್ಪಿದ್ದರು. ಇವರ ಮಗಳು ಪ್ರಿಯಾಗೆ ಇನ್ನು ಚಿಕಿತ್ಸೆ ನಡೆಯುತ್ತಿದ್ದು, ಸಂಬಂಧಿಕರ ರೋಧನ ಮುಗಿಲು ಮುಟ್ಟಿದೆ.
ಇನ್ನು ತಡವಾಗಲಿರುವ ವರದಿ
ಪ್ರಸಾದದಲ್ಲಿ ಸೇವಿಸಿರುವ ವಿಷ ಯಾವುದು ಎಂಬ ಬಗ್ಗೆ ಇನ್ನು ತನಿಖೆ ನಡೆಯುತ್ತಿದ್ದು, ವರದಿ ಬರುವುದು ತಡವಾಗಲಿದೆ ಎಂದು ಡಿಎಚ್ಒ ಪ್ರಸಾದ್ ತಿಳಿಸಿದ್ದಾರೆ.
ಪ್ರಸಾದವನ್ನು ಈಗಾಗಲೇ ಸಿಎಫ್ಟಿಆರ್ಐ ಹಾಗೂ ಎಫ್ಎಸ್ಎಲ್ ಲ್ಯಾಬ್ಗೆ ಕಳುಹಿಸಲಾಗಿದೆ. ಇದರಲ್ಲಿ ಸಿಎಫ್ಟಿಆರ್ಐ ವರದಿ ನಾಲ್ಕು ದಿನದಲ್ಲಿ ಬರಲಿದೆ. ಎಫ್ಎಸ್ಎಲ್ ವರದಿ ಬರುವುದು ತಡವಾಗಲಿದೆ ಎಂದರು.
ಜನರ ಮೇಲೆ ಈ ಮಟ್ಟಿನ ಪರಿಣಾಮ ಬೀರುವುದನ್ನು ಗಮನಿಸಿದರೆ, ಇದು ಕ್ರಿಮಿ ನಾಶಕಕ್ಕೆ ಬಳಸುವ ವಿಷವೇ ಆಗಿರಬೇಕು ಎಂಬ ಅನುಮಾನ ಕೂಡ ಬಲವಾಗಿದೆ. ಕ್ರಿಮಿನಾಶಕಕ್ಕೆ ಬಳಸುವ ಆರ್ಗೆನೋ ಪಾಸ್ಪೋರಸ್ ರಾಸಾಯನಿಕ ಬಳಸಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದ್ದು, ವರದಿ ಬಂದ ಬಳಿಕ ಇದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ.
ಫಾರೆನ್ಸಿಕ್ ಸೈನ್ಸ್ ಲ್ಯಾಬ್ ವರದಿಯಲ್ಲಿ ಮೋನೋ ಕ್ರೋಟೋಫಾಸ್ ವಿಷದಿಂದ ಈ ದುರ್ಘಟನೆ ನಡೆದಿರುವ ಸಂಭವವಿದೆ ಎಂದು ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ತಿಳಿಸಿದ್ದಾರೆ.
ಇದೊಂದು ಕ್ರೀಮಿನಾಶಕ ವಿಷವಾಗಿದೆ. ಇದು ನೇರವಾಗಿ ನರಗಳ ಮೇಲೆ ಪರಿಣಾಮ ಬಿರುತ್ತದೆ. ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ. ಈಗಾಗಲೇ 13 ಮಂದಿಯಿಂದಿ ತನಿಖೆ ನಡೆಯುತ್ತಿದೆ. ತನಿಖೆ ಹಂತದಲ್ಲಿರುವುದರಿಂದ ಯಾವುದೇ ಮಾಹಿತಿ ನೀಡೋಕೆ ಸಾಧ್ಯವಿಲ್ಲ. ತನಿಖೆ ಮುಗಿದ ಮೇಲೆ ಎಲ್ಲವನ್ನು ಮಾಹಿತಿ ನೀಡುತ್ತೇವೆ ಎಂದಿದ್ದಾರೆ.
ತನಿಖೆಗೆ ಸಂಪೂರ್ಣ ಸಹಕಾರ :
ಸುಳ್ವಾಡಿ ಮಾರಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸಾಲೂರು ಮಠದ ಕಿರಿಯಶ್ರೀ ಇಮ್ಮಡಿ ಮಹದೇವಸ್ವಾಮೀಜಿ ಪೂಜೆ ವಿಚಾರವಾಗಿ ವಿವಾದ ಇರುವುದು ನಿಜ ಎಂದು ಒಪ್ಪಿಕೊಂಡಿದ್ದು, ಪೂಜೆಯ ಹಕ್ಕಿಗಾಗಿ ಮಹದೇಶ್ವರ ತಮ್ಮಡಿ, ಬ್ರಹ್ಮೇಶ್ವರ ತಮ್ಮಡಿ ಗುಂಪುಗಳ ಮಧ್ಯೆ ವಿವಾದ ಏರ್ಪಟ್ಟಿತ್ತು. ಈ ವಿವಾದಕ್ಕೂ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ದೇವಸ್ಥಾನ ಹಣ ದುರುಪಯೋಗ ಆರೋಪ ನಿರಾಧಾರವಾಗಿದ್ದು, ಹಣಕಾಸಿನ ವ್ಯವಹಾರ ಪಾರದರ್ಶಕವಾಗಿದೆ. ಈ ರೀತಿ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು. ಈ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ಅಲ್ಲದೇ ಮೃತರ ಕುಟುಂಬಗಳಿಗೆ ಟ್ರಸ್ಟ್ ವತಿಯಿಂದ ಪರಿಹಾರ ನೀಡಲಾಗುವುದು ಎಂದರು.
ಏಳು ಜನರ ಮೇಲೆ ಪ್ರಕರಣ ದಾಖಲು:
ಪ್ರಕರಣ ಸಂಬಂಧ ಈಗಾಗಲೇ ಏಳು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕೊಳ್ಳೆಗಾಲ ಡಿಎಸ್ಪಿ ಮಾದಯ್ಯ ನೇತೃತ್ವದಲ್ಲಿ ಮೂರು ತಂಡ ರಚಿಸಲಾಗಿದ್ದು ವಿಚಾರಣೆ ಚುರುಕುಗೊಳಿಸಲಾಗಿದೆ. ಪ್ರಕರಣ ಸಂಬಂಧ ಚಿನ್ನಪ್ಪ ಮಾದೇಶ, ಈರಣ್ಣ, ಮಹದೇವ್ ಪೂಜಾರಿ, ಪುಟ್ಟಸ್ವಾಮಿಯನ್ನು ವಶಕ್ಕೆ ಪಡೆಯಲಾಗಿದೆ.