ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ, ಯುಪಿಎ ಮಿತ್ರ ಪಕ್ಷಗಳಿಂದಲೇ ವಿರೋಧ: ವರದಿ

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವುದಕ್ಕೆ ಯುಪಿಎ ಮಿತ್ರ ಪಕ್ಷಗಳೇ ವಿರೋಧ ವ್ಯಕ್ತಪಡಿಸಿವೆ ಎನ್ನಲಾಗಿದೆ.

ನಿನ್ನೆ ಚೆನ್ನೈನಲ್ಲಿ ನಡೆದ ಡಿಎಂಕೆ ಮುಖ್ಯಸ್ಥ ದಿವಂಗತ ಕರುಣಾನಿಧಿ ಅವರ ವಿಗ್ರಹ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ಒಕ್ಕೂಟದ ಮೈತ್ರಿ ಬಲಪ್ರದರ್ಶನವಾಯಿತಾದರೂ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸುವ ಪ್ರಸ್ತಾಪಕ್ಕೆ ಹಲವು ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ರಾಹುಲ್ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಇತರೆ ಪಕ್ಷಗಳ ಇರುಸು ಮುರುಸಿಗೆ ಕಾರಣ ಎನ್ನಲಾಗಿದೆ.

ಸ್ಟಾಲಿನ್ ಅವರ ಪ್ರಸ್ತಾಪಕ್ಕೆ ಸಮಾಜವಾದಿ ಪಕ್ಷ, ಟಿಡಿಪಿ, ಬಿಎಸ್ ಪಿ, ಟಿಎಂಸಿ ಮತ್ತು ಎನ್ ಸಿಪಿ ನಾಯಕರು ಪರೋಕ್ಷ ವಿರೋಧ ವ್ಯಕ್ತಪಡಿಸಿದ್ದು, ಚುನಾವಣೆಗೂ ಮೊದಲೇ ಪ್ರಧಾನಿ ಅಭ್ಯರ್ಥಿ ಘೋಷಣೆ ಬೇಡ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ ಪ್ರಸ್ತುತ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗಮನಾರ್ಹ ಪ್ರದರ್ಶನ ನೀಡಿದ್ದರೂ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸುವ ಮಟ್ಟಿಗೆ ಅವರ ವರ್ಚಸ್ಸು ಬೆಳೆದಿಲ್ಲ. ಅಲ್ಲದೆ ಯುಪಿಎ ಮೈತ್ರಿ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಗೆ ಈಗಾಗಲೇ ಪರೋಕ್ಷ ರೇಸ್ ಆರಂಭವಾಗಿದ್ದು, ಸಮಾಜವಾದಿ ಪಕ್ಷದಿಂದ ಮುಲಾಯಂ ಸಿಂಗ್ ಯಾದವ್, ಬಿಎಸ್ ಪಿ ಮುಖ್ಯಸ್ಥ ಮಾಯಾವತಿ, ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಮತ್ತು ಎನ್ ಸಿಪಿ ಮುಖಂಡ ಶರದ್ ಪವಾರ್ ಕೂಡ ಪ್ರಧಾನಿ ಹುದ್ದೆಯ ರೇಸ್ ನಲ್ಲಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಯುಪಿಎ ಮೈತ್ರಿಕೂಟದ ಅಧ್ಯಕ್ಷ ಸೋನಿಯಾಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿಯಾಗಿಸಲೂ ಹಲವು ನಾಯಕರು ಒಲವು ತೋರಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಚೆನ್ನೈನಲ್ಲಿ ಸ್ಚಾಲಿನ್ ಹೇಳಿಕೆ ಇದೀಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ