ಬೆಂಗಳೂರು,ಡಿ.17-ಪ್ರತಿಷ್ಠೆ, ಬಂಡುಕೋರರಿಗೆ ಅಧಿಕಾರ ತಪ್ಪಿಸಲು ಪ್ರತಿಪಕ್ಷಗಳು ಹೂಡಿದ ಗಾಳ, ಆಯ್ಕೆ ಸಂದರ್ಭದಲ್ಲಿ ಉಂಟಾದ ಗದ್ದಲ, ಗೊಂದಲಗಳಿಂದ ಮುಂದೂಡಿಕೆಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ತಿಂಗಳ ಅಂತ್ಯದಲ್ಲಿ ನಡೆಯುವ ಸಾಧ್ಯತೆ ಇದೆ.
ತಿಂಗಳ ಅಂತ್ಯದಲ್ಲಿ ನಡೆಯುವ ಬಿಬಿಎಂಪಿ ಮಾಸಿಕ ಸಭೆಯ ಕೌನ್ಸಿಲ್ ಹಾಲ್‍ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಯಬೇಕು. ಆದರೆ ಈ ಬಾರಿ ಅಧ್ಯಕ್ಷರ ಆಯ್ಕೆ ಮೇಯರ್ ಕೊಠಡಿಯಲ್ಲೇ ನಡೆಸುವ ಮೂಲಕ ಮೇಯರ್ ಗಂಗಾಂಬಿಕೆಯವರು ಹೊಸ ಪ್ರಯತ್ನಕ್ಕೆ ನಾಂದಿ ಹಾಡಲಿದ್ದಾರೆ.
ವಾರವೇ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು.ಆದರೆ ಮುಖಂಡರು ಅಧಿವೇಶನದಲ್ಲಿ ಬ್ಯುಸಿಯಾಗಿದ್ದಾರೆ.ಅಲ್ಲದೆ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕ, ಸಂಸದೀಯ ಕಾರ್ಯದರ್ಶಿಗಳ ನೇಮಕದ ಸಂಬಂಧ 21 ರಂದು ದೆಹಲಿಗೆ ತೆರಳಲಿದ್ದಾರೆ. ಹಾಗಾಗಿ ಈ ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ತಿಂಗಳ ಅಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಪ್ರಥಮ ವಾರದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಮೇಯರ್ ಕೊಠಡಿಯಲ್ಲಿ ನಡೆಯಲಿದೆ.
ಮೇಯರ್ ಆಯ್ಕೆ ಸಂದರ್ಭದಲ್ಲಿ ಮಾತ್ರ ಶಾಸಕರು, ಸಂಸದರು, ರಾಜ್ಯಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು ಹಾಜರಿರಬೇಕಾಗುತ್ತದೆ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಜನಪ್ರತಿನಿಧಿಗಳ ಅಗತ್ಯವಿಲ್ಲ. ಕಳೆದ ಸಭೆಯಲ್ಲಿ ಶಾಸಕರಾದ ಸತೀಶ್‍ರೆಡ್ಡಿ, ವಿಶ್ವನಾಥ್ ಮತ್ತಿತರರು ಅತೃಪ್ತರನ್ನು ಎತ್ತಿಕಟ್ಟಿ ಗೊಂದಲ ಉಂಟು ಮಾಡಿದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೇಯರ್ ಗಂಗಾಂಬಿಕೆಯವರು ಕಾನೂನು ತಜ್ಞರ ಸಲಹೆ ಪಡೆದಿದ್ದರು.ಅವರು ನೀಡಿದ ಸಲಹೆಯಂತೆ ಕೌನ್ಸಿಲ್ ಹಾಲ್‍ನಲ್ಲೇ ಅಧ್ಯಕ್ಷರ ಆಯ್ಕೆ ಮಾಡಬೇಕೆಂದೇನಿಲ್ಲ. ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸುವ ಅಗತ್ಯವಿಲ್ಲ. ಸಮಿತಿಯ 12 ಜನರು ಭಾಗವಹಿಸಿದರೆ ಸಾಕು. ನಿಮ್ಮ ಕೊಠಡಿಗೆ ಪ್ರತಿ ಸಮಿತಿಯ 12 ಜನರನ್ನು ಕರೆಸಿಕೊಂಡು ಅಧ್ಯಕ್ಷರನ್ನು ಆಯ್ಕೆ ಮಾಡಿ ಎಂದು ನೀಡಿದ ಸಲಹೆಯಂತೆ ಆಯ್ಕೆ ಪ್ರಕ್ರಿಯೆ ನಡೆಸಲು ಮೇಯರ್ ಮುಂದಾಗಿದ್ದಾರೆ.
ಎಸ್.ಜಿ.ನಾಗರಾಜ್‍ಗೆ ಒಲಿಯುವುದೇ ನಗರ ಯೋಜನೆ:
ಬಿಜೆಪಿಯಲ್ಲಿದ್ದುಕೊಂಡೇ ಕಾಂಗ್ರೆಸ್ ಬೆಂಬಲ ಪಡೆದು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆಯಲು ಪ್ರಯತ್ನ ನಡೆಸಿದ್ದ ಭೆರಸಂದ್ರ ನಾಗರಾಜ್ ಅವರ ಯತ್ನ ವಿಫಲವಾಗಿತ್ತು.
ನಾಗರಾಜ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಬಿಜೆಪಿ ಪಕ್ಷ ಮುಜುಗರಕ್ಕೀಡಾಗುತ್ತದೆ.ಹಾಗಾಗಿ ಇದನ್ನು ತಪ್ಪಿಸಲು ಜೆಡಿಎಸ್‍ನ ಮಂಜುಳಾ ನಾರಾಯಣಸ್ವಾಮಿ ಹಾಗೂ ದೇವದಾಸ್ ಅವರಿಗೆ ಗಾಳ ಹಾಕಲಾಗಿತ್ತು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಹಾಗೂ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಆಯ್ಕೆ ಸಂದರ್ಭದಲ್ಲಿ ಇವರಿಗೆ ಬೆಂಬಲ ನೀಡಲು ಬಿಜೆಪಿ ನಿರ್ಧರಿಸಿತ್ತು.
ಇದನ್ನು ಕೈ ಬಿಡಬೇಕಾದರೆ ಎನ್.ನಾಗರಾಜ್ ಅವರನ್ನು ಬೆಂಬಲಿಸಬಾರದೆಂದು ಎಂದು ಪಟ್ಟು ಹಿಡಿದಿದ್ದರು. ಈ ಎಲ್ಲಾ ಗದ್ದಲ, ಗೊಂದಲಗಳ ನಡುವೆ ಚುನಾವಣೆ ಮುಂದೂಡಿಕೆಯಾಗಿತ್ತು. ಈ ವಾರದಲ್ಲಿ ಚುನಾವಣೆಯಲ್ಲಿ ನಡೆಯಬೇಕಾಗಿತ್ತು.ತಿಂಗಳ ಅಂತ್ಯದಲ್ಲಿ ನಡೆಯಲಿರುವ ಚುನಾವಣೆ ನಗರ ಯೋಜನೆ ಸ್ಥಾಯಿ ಸಮಿತಿ ಯಾರ ಪಾಲಾಗಲಿದೆ. ಬಿಜೆಪಿಯಿಂದ ಅಮಾನತುಗೊಂಡಿರುವ ಎನ್.ನಾಗರಾಜ್ ಅಥವಾ ಕಾಂಗ್ರೆಸ್ ಎಸ್.ಜಿ.ನಾಗರಾಜ್‍ಗೆ ಒಲಿಯಲಿದೆಯೋ ಕಾದುನೋಡಬೇಕು.