ಬೆಳಗಾವಿ,ಡಿ,17-ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಂಡು ಆಡಳಿತಾಧಿಕಾರಿ ನೇಮಿಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ಮಾಜಿ ಸಚಿವ ಸಿ.ಟಿ.ರವಿ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಡಿದ ಅವರು, ಸಕ್ಕರೆ ಕರ್ಖಾನೆಗಳು ಬಿಜೆಪಿಯವರದೇ ಆಗಿರಲಿ, ಕಾಂಗ್ರೆಸ್ನವರದೇ ಆಗಿರಲಿ ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು, ನಾವು ರೈತಪರವಾಗಿದ್ದು, ಆಡಳಿತ ನಡೆಸುತ್ತಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದರು.
ಹಲವು ದಿನಗಳಿಂದ ಬಾಕಿ ಕೊಡಿಸುವಂತೆ ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಅವರ ಹೋರಾಟಕ್ಕೆ ಬೆಲೆ ಇಲ್ಲ. ಸರ್ಕಾರದಿಂದ ಗಡವು ಕೊಡಿಸುವ ಕೆಲಸ ಮಾತ್ರ ಆಗುತ್ತಿದೆ.ಜಿಲ್ಲಾಧಿಕಾರಿಗಳು ಸಹ ಅಸಹಾಯಕರಾಗಿದ್ದಾರೆ.ರೈತರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣವೇ ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣವನ್ನು ಸರ್ಕಾರ ಕೊಡಿಸಬೇಕು. ಕಬ್ಬು ಬೆಳೆಗಾರರಿಗೆ ನೀಡಬೇಕಾಗಿರುವ ಬಾಕಿ ಹಣ ದೊರೆಯದೆ ಬೆಳೆಗಾರರು ಹತಾಶ ಸ್ಥಿತಿಯಲ್ಲಿದ್ದಾರೆ. ಸಾಲಮನ್ನಾಕ್ಕಿಂತ ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಹಣ ಕೊಡಿಸಿ ಎಂದು ರೈತರು ಆಗ್ರಹಿಸುತ್ತಿದ್ದಾರೆ ಎಂದರು.
ಕೆಟ್ಟ ಆಡಳಿತದಿಂದ ಜನರಿಗೆ ನಷ್ಟವಾಗದಿದ್ದರೆ ಸಾಕು.ಉತ್ತರ ಕರ್ನಾಟಕ ಭಾಗದ ಜನರ ಭಾವನೆಗೆ ಸ್ಪಂದಿಸುವ ಕೆಲಸವಾಗಬೇಕಾಗಿದೆ.ಇಲ್ಲಿ ಸುವರ್ಣಸೌಧ ನಿರ್ಮಿಸಿ ಅಧಿವೇಶನ ನಡೆಸುತ್ತಿರುವುದೇ ಇದರ ಉದ್ದೇಶದಿಂದ. ಹೀಗಾಗಿ ಈ ಭಾಗದ ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ನವರಿಗೆ ಕೆಟ್ಟ ಮೇಲೆ ಬುದ್ದಿ ಬಂತು ಎಂಬ ಗಾದೆ ಅನ್ವಯವಾದಂತಾಗಿದೆ. ಕಾಂಗ್ರೆಸ್ನ ಕೆಲವರಿಗೆ ಈಗ ಜ್ಞಾನೋದಯವಾಗಿದೆ.ರಾಜ್ಯ ಆಡಳಿತ ಕೆಡುವ ಮುನ್ನ ಜ್ಞಾನೋದಯವಾದರಷ್ಟೇ ಸಾಕು ಎಂದು ಮಾರ್ಮಿಕವಾಗಿ ನುಡಿದರು.
ಜೆಡಿಎಸ್-ಕಾಂಗ್ರೆಸ್ಗೆ ಕೆಟ್ಟ ಆಡಳಿತದಿಂದ ನಷ್ಟವೇನಾಗುವುದಿಲ್ಲ. ನಾಡಿನ ಜನರಿಗೆ ನಷ್ಟವಾಗದಿರಲಿ ಎಂದರು.