ಲಾಹೋರ್: ಪಾಕಿಸ್ತಾನ ಜೈಲಿನಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಭಾರತೀಯ ಮೂಲದ ಖೈದಿ ಸರಬ್ಜಿತ್ ಸಿಂಗ್ ಶಂಕಿತ ಕೊಲೆ ಆರೋಪಿಗಳನ್ನು ಪಾಕ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮರಣ ದಂಡನೆ ಗುರಿಯಾಗಿರುವ ಅಮಿರ್ ಮತ್ತು ಮುದಾಸರ್ ಎಂಬ ಖೈದಿಗಳನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಕೋರ್ಟ್ ಖುಲಾಸೆಗೊಳಿಸಿ ಆದೇಶಿ ಹೊರಡಿಸಿದೆ. ಶಂಕಿತ ಆರೋಪಿಗಳ ವಿರುದ್ಧ ಒಂದು ಚಿಕ್ಕ ಸಾಕ್ಷಿಗಳು ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
1990ರ ಲಾಹೋರ್ ಹಾಗೂ ಮುಲ್ತಾನ್ನಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ 14 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸರಬ್ಜಿತ್ ಸಿಂಗ್ ಭಾಗಿಯಾಗಿದ್ದ ಎಂದು ಪಾಕಿಸ್ತಾನ ಆರೋಪಿಸಿತ್ತು. ಅಲ್ಲದೇ ಗೂಢಚರ್ಯೆ ಆರೋಪವು ಸರಬ್ಜಿತ್ ವಿರುದ್ಧ ಕೇಳಿ ಬಂದಿತ್ತು. ಬಳಿಕ ಸರಬ್ಜಿತ್ ಸಿಂಗ್ನನ್ನು ಭಾರತ -ಪಾಕ್ ಗಡಿ ಭಾಗದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಿಂದ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿತ್ತು. ಸರಬ್ಜಿತ್ ಬಿಡುಗಡೆಗೆ ಆಗ್ರಹಿಸಿ ಭಾರತದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು.
ಅಂತಿಮವಾಗಿ 2013ರಲ್ಲಿ ಲಾಹೋರ್ನ ಕೋಟ್ ಲಕ್ಪತ್ ಜೈಲಿನಲ್ಲಿ ಸರಬ್ಜಿತ್ ಸಿಂಗ್ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಸರಬ್ಜಿತ್ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದರೆ, ಪಾಕಿಸ್ತಾನ ಹೃದಯಾಘಾತದಿಂದ ಸರಬ್ಜಿತ್ ಮೃತಪಟ್ಟಿದ್ದಾರೆ ಎಂದು ವಾದಿಸಿತ್ತು. ಪ್ರಕರಣ ಸಂಬಂಧ ಅಮಿರ್ ಮತ್ತು ಮುದಾಸರ್ ಎಂಬ ಖೈದಿಗಳನ್ನು ಬಂಧಿಸಲಾಗಿತ್ತು. ಆದರೀಗ ಸಾಕ್ಷ್ಯಾಧಾರಗಳ ಕೊರತೆಯಿಂದ ಇವರಿಬ್ಬರನ್ನು ಖುಲಾಸೆಗೊಳಿಸಲಾಗಿದೆ.