ಬೆಂಗಳೂರು,ಡಿ.16- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಹುಟ್ಟುಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಂಡರು.
ಕುಮಾರಸ್ವಾಮಿ ಅವರು 59 ವರ್ಷವನ್ನು ಪೂರ್ಣಗೊಳಿಸಿ 60ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಪತ್ನಿ ಹಾಗೂ ಶಾಸಕಿ ಅನಿತಾಕುಮಾರಸ್ವಾಮಿ, ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ಖಾಸಗಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಹುಟ್ಟುಹಬ್ಬದ ಸಂದರ್ಭದಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸದಂತೆ ಹಾಗೂ ಪರಿಸರ ಕಾಳಜಿ ತೋರುವಂತೆ ನಿನ್ನೆಯೇ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದ್ದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿಯನ್ನು ಭೇಟಿ ಮಾಡಬಹುದಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ನಿನ್ನೆಯೇ ತಿಳಿಸಿತ್ತು.
ಹೀಗಾಗಿ ಮುಖ್ಯಮಂತ್ರಿಗಳ ಕೋರಿಕೆಯಂತೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಕೂಡ ಸರಳವಾಗಿ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಿಸಿದ್ದಾರೆ. ಕೆಲವೆಡೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರೆ, ಕೆಲವೆಡೆ ಆರೋಗ್ಯ ತಪಾಸಣಾ ಶಿಬಿರ, ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.