ಆಸ್ತಿ ತೆರಿಗೆಯನ್ನು ಪಾವತಿಸದ ಕಟ್ಟಡ ಮಾಲೀಕರು ಕೂಡಲೇ ತೆರಿಗೆ ಪಾವತಿಸಬೇಕು ಪಾವತಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು, ಜಂಟಿ ಆಯುಕ್ತರ ಎಚ್ಚರಿಕೆ

ಬೆಂಗಳೂರು, ಡಿ.16- ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದ ಕಟ್ಟಡ ಮಾಲೀಕರು ಕೂಡಲೇ ತೆರಿಗೆ ಪಾವತಿಸಬೇಕು.ಒಂದು ವೇಳೆ ಪಾವತಿಸದಿದ್ದರೆ ದಂಡ ಹಾಗೂ ಜಫ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿಯ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್.ಸಿ. ಜಗದೀಶ್ ಹಾಗೂ ಉಪ ಆಯುಕ್ತ ಕೆ.ಶಿವೇಗೌಡ ಎಚ್ಚರಿಸಿದ್ದಾರೆ.

ಮಹದೇವಪುರ ವಲಯದ ಹೂಡಿ, ವೈಟ್‍ಫೀಲ್ಡ್, ಮಾರತ್‍ಹಳ್ಳಿ, ಕೆ.ಆರ್.ಪುರ, ಹೊರಮಾವು ಮತ್ತು ಹೆಚ್.ಎ.ಎಲ್ ಸೇರಿದಂತೆ ಒಟ್ಟು ಆರು ಕಂದಾಯ ಉಪ ವಿಭಾಗಗಳಲ್ಲಿ 2018-19ನೇ ಸಾಲಿನ ಆಸ್ತಿ ತೆರಿಗೆ ಬೇಡಿಕೆ 556 ಕೋಟಿ ರೂ. ಹಾಗೂ ಬಾಕಿ ಆಸ್ತಿ ತೆರಿಗೆ ಬೇಡಿಕೆ 244 ಕೋಟಿ ರೂ. ಒಳಗೊಂಡಂತೆ ಒಟ್ಟು ವಸೂಲಿ ಮಾಡಬೇಕಾಗಿರುವ ಆಸ್ತಿ ತೆರಿಗೆಯ ಮೊತ್ತ 800 ಕೋಟಿ ರೂ.ಆಗಿದೆ.

ಈವರೆಗೆ ವಸೂಲಿಯಾಗಿರುವ ಆಸ್ತಿ ತೆರಿಗೆ ಮೊತ್ತ 511.59 ಕೋಟಿ ರೂ.ಆಗಿದ್ದು, ವಸೂಲಿ ಮಾಡಬೇಕಾಗಿರುವ ಮೊತ್ತ 288.41 ಕೋಟಿ ರೂ.ಆಗಿದೆ.ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ಹಾಗೂ ಅನುಭವದಾರರ ವಿವರಗಳನ್ನು ಈಗಾಗಲೇ ವಾರ್ಡ್ ಕಚೇರಿಗಳಲ್ಲಿ, ಉಪ ವಿಭಾಗಗಳ ಕಚೇರಿಗಳಲ್ಲಿ ಮತ್ತು ವಲಯ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಒಟ್ಟು 9891 ಕಟ್ಟಡಗಳ ಮಾಲೀಕರಿಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ.ಆರು ಉಪ ವಿಭಾಗಗಳಿಂದ ಟಾಪ್-500 ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸುಸ್ಥಿದಾರರ ಪಟ್ಟಿ ಮಾಡಲಾಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 100 ಕ್ಕೂ ಹೆಚ್ಚು ಸುಸ್ಥಿದಾರರಿಗೆ ಜಪ್ತಿ ವಾರೆಂಟನ್ನು ಜಾರಿಗೊಳಿಸಲಾಗಿದೆ.

ಜಪ್ತಿ ಮಾಡುವುದಕ್ಕೆ ಮೊದಲೆ ಬಹುತೇಕ ಜಪ್ತಿ ವಾರೆಂಟ್ ಜಾರಿಗೊಳಿಸಿದ ಕೂಡಲೇ ಕೆಲವು ಆಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿಸಲು ಮುಂದಾಗಿದ್ದಾರೆ.ಇನ್ನೂ ಉಳಿದ ಸುಸ್ಥಿದಾರರಿಗೂ ಕೂಡ ಜಪ್ತಿ ವಾರೆಂಟ್‍ಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಮುಂದುವರೆಯುತ್ತಿದೆ.

ಮಹದೇವಪುರ ವಲಯದ ಟಾಪ್ 500 ಸುಸ್ಥಿದಾರರು ಪಾವತಿಸಬೇಕಾಗಿರುವ ಆಸ್ತಿ ತೆರಿಗೆಯ ಮೊತ್ತ 29,93,36,605 ರೂ ಆಗಿದೆ. ಜಪ್ತಿಯಿಂದ ತಪ್ಪಿಸಿಕೊಳ್ಳಲು ಕೂಡಲೇ ಆಸ್ತಿ ತೆರಿಗೆ ಪಾವತಿಸುವಂತೆ ಮಹದೇವಪ್ಮರ ವಲಯದ ಜಂಟಿ ಆಯುಕ್ತ ಎನ್. ಸಿ.ಜಗದೀಶ್ ಹಾಗೂ ಉಪ ಆಯುಕ್ತರಾದ ಕೆ. ಶಿವೇಗೌಡ ಅವರು ತೆರಿಗೆ ಸುಸ್ಥಿದಾರ ಕಟ್ಟಡ ಮಾಲೀಕರಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ