
ರಾಯ್ ಬರೇಲಿ: ಹಮ್ ಸಫರ್ ಟ್ರೇನ್ ರೇಕ್ ಹಾಗೂ 900ನೇ ರೈಲ್ವೆ ಕೋಚ್ ಅತ್ಯಾಧುನಿಕ ಕಾರ್ಖಾನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಚಾಲನೆ ನೀಡಿದರು.
ಇದೇ ವೇಳೆ ಅವರು 1,100 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು. ಇದಕ್ಕೂ ಮುನ್ನ ರಾಯ್ ಬರೇಲಿಯಲ್ಲಿ ರೈಲು ಬೋಗಿ ತಯಾರಿಕಾ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿದರು. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರೈತರ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದೆ. ಆದರೆ ಯೋಜನೆ ಯಾವೊಬ್ಬ ರೈತರಿಗೂ ತಲುಪಿಲ್ಲ. ಕಾರಣ ಇನ್ನೂ ಯೋಜನೆ ಅಸ್ಥಿತ್ವಕ್ಕೇ ಬಂದಿಲ್ಲ ಎಂದು ಗುಡುಗಿದರು.
ರೈತರ ಸಾಲಮನ್ನಾ ಮಾಡುವುದಾಗಿ ಜೆಡಿಎಸ್ ಜತೆ ಸೇರಿ ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿದೆ. ಆದರೆ ವಾಗ್ದಾನ ಘೋಷಣೆಯಾಗಿಯೇ ಉಳಿದಿದೆ ಹೊರತೂ ಸಾಲಮನ್ನಾ ಆಗಿಲ್ಲ. ರೈತರುಗಳಿಗೆ ಜಮೀನು ಜಪ್ತಿಯಾಗುವ ಸ್ಥಿತಿ ಬಂದಿದ್ದು, ಬ್ಯಾಂಕ್ ಗಳಿಂದ ನೋಟೀಸ್ ಗಳು ಬರುತ್ತಿವೆ ಎಂದು ಕಿಡಿಕಾರಿದ್ದಾರೆ.
ಇನ್ನು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಕೇಂದ್ರ ಸರ್ಕಾರವನ್ನು ಸಿಕ್ಕಿಸುವ ವ್ಯರ್ಥ ಪ್ರಯತ್ನ ಮಾಡಿದ ಕಾಂಗ್ರೆಸ್, ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಈಗ ಮುಖಭಂಗ ಅನುಭವಿಸುತ್ತಿದೆ. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಭಾರತೀಯ ವಾಯು ಸೇನೆಗೆ ಯಾವುದೇ ಹೊಸ ಶಸ್ತ್ರಾಸ್ತ್ರ ಕೊಡಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ವಾಯುಸೇನೆಗೆ ಬಲ ತುಂಬುವ ಯತ್ನ ಮಾಡಿದೆ. ಆದರೆ ಇದಕ್ಕೂ ಅಡ್ಡಿ ಉಂಟುಮಾಡಲು ಕಾಂಗ್ರೆಸ್ ಯತ್ನ ನಡೆಸಿ, ವಿಫಲವಾಯಿತು ಎಂದರು.
ಭಾರತೀಯ ಸೇನೆಯ ಕಡೆಗಿನ ಕಾಂಗ್ರೆಸ್ ಮನೋಭಾವವನ್ನು ದೇಶದ ಜನರು ಎಂದು ಮರೆಯುವುದಿಲ್ಲ. ಕಾಂಗ್ರೆಸ್ ನ್ನು ಕ್ಷಮಿಸುವುದಿಲ್ಲ ಎಂದರು. ಬಿಜೆಪಿಗೆ ದೇಶವೇ ಮೊದಲು ಹೊರತು ಪಕ್ಷವಲ್ಲ. ದೇಶಕ್ಕಾಗಿ ತಮ್ಮ ಜೀವವನ್ನು ತ್ಯಾಗ ಮಾಡುವ ಯೋಧರು ಯಾವುದೇ ಕಷ್ಟಗಳನ್ನು ಎದುರಿಸದಿರುವಂತೆ ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಧಾನಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮಂದಿ ಸರ್ಜಿಕಲ್ ದಾಳಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ನಮ್ಮ ಸೇನೆಗಿಂತ ಶತ್ರುಗಳ ಬೆಲೆಯನ್ನು ಹೆಚ್ಚು ನಂಬುತ್ತಾರೆ. ಅಂಥವರಿಂದ ನಾವು ಏನನ್ನು ನೀರಿಕ್ಷಿಸಬಹುದು? ಎಂದು ಕುಟುಕಿದರು.
ಯುಪಿಎ ಅವಧಿಯ ಪ್ರತಿಯೊಂದು ರಕ್ಷಣಾತ್ಮಕ ಒಪ್ಪಂದದಲ್ಲೂ ಇತರೆ ಕೆಲವು ವಿದೇಶಿಗರು ತೊಡಗಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅಗಸ್ತಾವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದ ಆರೋಪಿಯನ್ನು ದೇಶಕ್ಕೆ ಕರೆತಂದಿದ್ದೇವೆ. ಆತನನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ತಮ್ಮ ವಕೀಲರನ್ನು ನೇಮಿಸಿದ್ದನ್ನು ನೀವೆಲ್ಲ ನೋಡಿದ್ದೀರ ಎಂದು ಪ್ರಧಾನಿ ತಿಳಿಸಿದರು.
ಇನ್ನು ರಾಯ್ ಬರೇಲಿಯ ಅತ್ಯಾಧುನಿಕ ರೈಲ್ವೆ ಕೋಚ್ ಕಾರ್ಖಾನೆಯ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದರಿಂದ ಯುವ ಇಂಜಿನಿಯರ್ ಹಾಗೂ ತಂತ್ರಜ್ಞರಿಗೆ ಹೆಚ್ಚು ಉದ್ಯೋಗ ಸಿಗಲಿದೆ. ಆದರೆ, ಕಾರ್ಖಾನೆ ಹೆಚ್ಚು ಸಾಮರ್ಥ್ಯದಿಂದ ಕೆಲಸ ಮಾಡಲು ಹಿಂದಿನ ಸರ್ಕಾರ ಬಿಟ್ಟಿರಲಿಲ್ಲ ಎಂದು ಮೋದಿ ಕಿಡಿಕಾರಿದರು. ಅಲ್ಲದೆ, ರಾಯ್ ಬರೇಲಿ ರೈಲ್ವೆ ಕೋಚ್ ಉತ್ಪಾದನಾ ಕಾರ್ಖಾನೆ ಮುಂದಿನ ದಿನಗಳಲ್ಲಿ ವಿಶ್ವದ ದೊಡ್ಡ ಉತ್ಪಾದನಾ ಕಾರ್ಖಾನೆಯಾಗಲಿದೆ ಎಂದು ಭವಿಷ್ಯ ನುಡಿದರು.
ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಧಾನಿಗೆ ಸಾಥ್ ನೀಡಿದರು. ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಅವರು ರಾಯ್ ಬರೇಲಿಗೆ ಭೇಟಿ ನೀಡಿದ್ದಾರೆ.
PM flags off 900th coach, Ham Safar train rake, slams Cong for ignoring Raebareli