ಬೆಂಗಳೂರು,ಡಿ.15- ರಾತ್ರಿ ವೇಳೆ ದರೋಡೆಕೋರರು ಕಾದು ಕುಳಿತು ಒಂಟಿಯಾಗಿ ಹೋಗುವ ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ, ಸುಲಿಗೆ ಮಾಡುತ್ತಿರುವ ಪ್ರಕರಣಗಳಿಂದ ರಾತ್ರಿ ಪಾಳ್ಯ ನೌಕರರು ಭಯಭೀತರಾಗಿದ್ದಾರೆ.
ಕೆಲಸ ಮುಗಿಸಿಕೊಂಡು ರಾತ್ರಿ ವೇಳೆ ಒಂಟಿಯಾಗಿ ಮನೆಗೆ ಹೋಗುವುದೇ ದುಸ್ಸಾಹಸವಾಗಿದೆ.
ನಿನ್ನೆ ರಾತ್ರಿ ಕೆಲಸ ಮುಗಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಬಂದ ಮೂವರು ದರೋಡೆಕೋರರು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಬೆದರಿಸಿ ದರೋಡೆ ಮಾಡಿದ್ದಾರೆ.
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಪೀಟರ್ ಪ್ರಮೋದ್ ಎಂಬುವರು ದರೋಡೆಗೊಳಗಾಗಿದ್ದು, ಇವರಿಂದ 11 ಗ್ರಾಂ ಸರ ಹಾಗೂ 4 ಗ್ರಾಂ ಉಂಗುರವನ್ನು ಸುಲಿಗೆ ಮಾಡಿದ್ದಾರೆ.
ಎಚ್ಎಸ್ಆರ್ ಲೇಔಟ್:
ರಸ್ತೆಬದಿ ಕಾರು ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ದರೋಡೆಕೋರರು ನೆಲದ ಮೇಲೆ ಬೀಳಿಸಿದ್ದ 10 ರೂ.ತೋರಿಸಿ 120 ಗ್ರಾಂ ಆಭರಣವಿದ್ದ ಬ್ಯಾಗ್ನ್ನು ದರೋಡೆ ಮಾಡಿದ್ದಾರೆ.
ರೂಪೇನ ಅಗ್ರಹಾರ ಸರ್ವಿಸ್ ರಸ್ತೆಯಲ್ಲಿ ಸತೀಶ್ ಬಾಬು ಎಂಬುವರು ರಾತ್ರಿ 8.30ರ ಸಮಯದಲ್ಲಿ ಕಾರನ್ನು ಪಾರ್ಕ್ ಮಾಡಿ ನಿಂತಿದ್ದರು. ಈ ವೇಳೆ ದರೋಡೆಕೋರರು 10 ರೂ.ಬೀಳಿಸಿ ಸತೀಶ್ ಬಾಬು ಅವರ ಗಮನಸೆಳೆದು ನಿಮ್ಮ ಹಣ ಬಿದ್ದಿದೆ ಎಂದು ಹೇಳಿದರು.
ಸತೀಶ್ ಅವರು ತಮ್ಮದೇ ಇರಬಹುದು ಎಂದು ಹಣ ತೆಗೆದುಕೊಳ್ಳುತ್ತಿದ್ದಂತೆ ದರೋಡೆಕೋರರ ಪೈಕಿ ಒಬ್ಬಾತ ಕಾರಿನ ಕಿಟಕಿ ಮೂಲಕ ಕೈ ತೂರಿಸಿ ಸೀಟಿನ ಮೇಲಿದ್ದ 120 ಗ್ರಾಂ ಆಭರಣವಿದ್ದ ಬ್ಯಾಗ್ನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.