ಬೆಂಗಳೂರು, ಡಿ.15- ಸಿಲಿಕಾಲ್ ಸಿಟಿಯನ್ನು ಶೂನ್ಯ ತ್ಯಾಜ್ಯದೆಡೆಗೆ ಕೊಂಡೊಯ್ಯಲು ಸ್ವಚ್ಛ ಗ್ರಹ ಕಲಿಕಾ ಕೇಂದ್ರದ ಮೂಲಕ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆಯುವಂತಹ ಕಾರ್ಯಕ್ಕೆ ಮುಂದಾಗಿದೆ ಎಂದು ಶಾಸಕ ಎಂ.ಸತೀಶ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಎಚ್.ಎಸ್.ಅರ್.ಬಡಾವಣೆಯ ಉದ್ಯಾನವನದಲ್ಲಿ ದೇಶದಲ್ಲೇ ಮೊದಲ ಸ್ವಚ್ಛ ಗ್ರಹ ಕಲಿಕಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಉತ್ಪತ್ತಿಯಾಗುವ ಶೇ.90ರಷ್ಟು ಕಸವನ್ನು ಜೈವಿಕ ಗೊಬ್ಬರವನ್ನಾಗಿ ಪರಿವರ್ತಿಸಬಹುದಾಗಿದೆ. 1.5 ಎಕರೆ ಉದ್ಯಾನವನವನ್ನು ಕಲಿಕಾ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ.ಇದರಲ್ಲಿ 20 ಕ್ಕೂ ಹೆಚ್ಚು ಗೊಬ್ಬರ ತಯಾರಿಕಾ ಘಟಕಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿದೆ ಎಂದರು.
ಅಲ್ಲದೆ, ಒಂದು ಬಯೋಗ್ಯಾಸ್ ಯೂನಿಟ್ ಕೂಡಾ ಹೊಂದಿದ್ದು, ಹೆಚ್‍ಎಸ್ ಆರ್ ಸಿಟಿಜನ್ ಪೊರಮ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ರೌಂಡ್ ಟೇಬಲ್ ಅವರ ಸಹಯೋಗದಲ್ಲಿ ಇದನ್ನು ಪ್ರಾರಂಭಿಸಲಾಗಿದೆ.ಇದು ನಗರದ ಹಾಗೂ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇವಾರಿಗೆ ಉತ್ತರ ನೀಡಲಿದೆ ಎಂದು ತಿಳಿಸಿದರು.
ಹೆಚ್ ಎಸ್ ಆರ್ ಸಿಟಿಜನ್ ಪೊರಂ ನ ಚಿತ್ರಾ ಪ್ರನೀತ್ ಮಾತನಾಡಿ, 2017 ಡಿಸೆಂಬರ್ ನಲ್ಲಿ ಬೊಮ್ಮನಹಳ್ಳಿ ಶಾಸಕರ ಸಹಯೋಗದಲ್ಲಿ ಕಾಂಪೊಸ್ಟಿಂಗ್ ಗೆ ಚಾಲನೆ ನೀಡಲಾಗಿತ್ತು. ಈಗ ಇಲ್ಲಿ 10 ಲೇನ್ ಕಾಂಪೊಸ್ಟರ್‍ಗಳನ್ನು ಅಳವಡಿಸಲಾಗಿದೆ.ಈ ಪ್ರಾತ್ಯಕ್ಷಿಕೆಯ ಮೂಲಕ ಅಪಾರ್ಟ್‍ಮೆಂಟ್ ನಿವಾಸಿಗಳು ಹಾಗೂ ಜನಸಾಮಾನ್ಯರು ಸುಲಭವಾಗಿ ಕಾಂಪೊಸ್ಟ್ ಮಾಡಬಹುದಾದ ಕ್ರಮಗಳನ್ನು ತಿಳಿಸಿಕೊಡಲಾಗುವುದು ಎಂದರು.
ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್, ಕಾರ್ಪೊರೇಟರ್ರ್ಗಳಾದ ಗುರುಮೂರ್ತಿ ರೆಡ್ಡಿ, ರಾಮ್ ಮೋಹನ ರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.