ಚಾಮರಾಜನಗರ: ಹನೂರು ತಾಲೂಕಿನ ಮಾರಮ್ಮ ದೇವಾಲಯದಲ್ಲಿ ವಿಷಮಿಶ್ರಿತ ಪ್ರಸಾದ ತಿಂದು ಒಂದೇ ಮೃತಪಟ್ಟ ಗ್ರಾಮದ 7 ಮಂದಿಯನ್ನು ಒಂದೇ ಕಡೆ ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರು ನಿರ್ಧಾರ ಮಾಡಿದ್ದಾರೆ.
ಬಿದರಹಳ್ಳಿಯ ಶಾಂತಾ, ಗೋಪಿ, ಕುಮಾರ್, ಶರತ್, ಶಾಂತತ್ವತಿ, ಪ್ರೀತಂ, ಸಾಲಮ್ಮ ಮೃತಪಟ್ಟಿದ್ದು, ಮೃತದೇಹಗಳನ್ನು ಅಂಬುಲೆನ್ಸ್ ಮೂಲಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೃತ ದೇಹಗಳಿಗೆ ಬೆಂಕಿ ಇಟ್ಟು ಅಂತ್ಯಸಂಸ್ಕಾರ ಮಾಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶುಕ್ರವಾರ ಮಾರಮ್ಮ ದೇವಾಲಯದಲ್ಲಿ ವಿಷ ಮಿಶ್ರಿತ ರೈಸ್ ಬಾತ್ ತಿಂದಿದ್ದು, ಸುಮಾರು 11 ಮಂದಿ ಮೃತಪಟ್ಟಿದ್ದು, 80ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾದವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅನೇಕ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಈಗಾಗಲೇ ಈ ಪ್ರಕರಣ ಕುರಿತು ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದು, ಮೃತರ ಕುಟುಂಬದ ಸದಸ್ಯರಿಗೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.