ಕಾಂಗ್ರೆಸ್​ಗೆ ಕಗ್ಗಂಟಾಗಿದೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ; ರಾಜಸ್ಥಾನ, ಛತ್ತೀಸ್​ಗಢ ಸಿಎಂ ಆಯ್ಕೆಗೆ ಇಂದು ರಾಹುಲ್ ಸಭೆ

ನವದೆಹಲಿ: ಮಧ್ಯ ಪ್ರದೇಶ, ಛತ್ತೀಸ್​ಗಢ ಹಾಗೂ ರಾಜಸ್ಥಾನದಲ್ಲಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್​ಗೆ ಈಗ ಮುಖ್ಯಮಂತ್ರಿ ಪಟ್ಟ ಯಾರಿಗೆ ಕಟ್ಟಬೇಕು ಎಂಬ ಸಮಸ್ಯೆ ಉದ್ಭವಿಸಿದೆ. ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರನ್ನು ಸಿಎಂ ಎಂದು ಈಗಾಗಲೇ ನಿರ್ಧಾರ ಮಾಡಲಾಗಿದೆ. ಆದರೆ, ರಾಜಸ್ಥಾನದ ಸಿಎಂ ಅಭ್ಯರ್ಥಿ ಆಯ್ಕೆ ಜಟಿಲವಾಗಿ ಪರಿಣಮಿಸಿದೆ. ರಾಜಸ್ಥಾನ ಮತ್ತು ಛತ್ತೀಸ್​ಗಢ ರಾಜ್ಯಕ್ಕೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲು ರಾಹುಲ್​ ಗಾಂಧಿ ಇಂದು ಸಭೆ ನಡೆಸಲಿದ್ದಾರೆ.
ಗುರುವಾರ ತಡರಾತ್ರಿವರೆಗೂ ಸಭೆ ನಡೆಸಿದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಮಧ್ಯಪ್ರದೇಶದ ಸಿಎಂ ಆಗಿ ಕಮಲನಾಥ್​ ರನ್ನು ಆಯ್ಕೆ ಮಾಡುವ ಮೂಲಕ ಜ್ಯೋತಿರಾದಿತ್ಯ ಸಿಂದ್ಯಗೆ ನಿರಾಸೆ ಮೂಡಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಸಮಸ್ಯೆ ಬಗೆಹರಿದರೂ ರಾಜಸ್ಥಾನ ಹಾಗೂ ಛತ್ತೀಸ್​ಗಢ ರಾಜ್ಯಗಳಲ್ಲಿ ಸಿಎಂ ಯಾರು ಎಂಬ ಪ್ರಶ್ನೆಗೆ ಇನ್ನು ಉತ್ತರ ದೊರೆತಿಲ್ಲ. ಇಂದು ಕೂಡ ರಾಹುಲ್​ ಗಾಂಧಿ ಸಿಎಂ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ ರಾಜಸ್ಥಾನದಲ್ಲಿ ಪಕ್ಷದ ನಾಯಕರು ಅಶೋಕ್​ ಗೆಹ್ಲೋಟ್​ ಅಧಿಕಾರದ ಚುಕ್ಕಾಣಿ ಹಿಡಿಯಲು ಬಯಸಿದ್ದಾರೆ. ಆದರೆ ಸಚಿನ್​ ಪೈಲಟ್​ ಯಾವುದೇ ಕಾರಣಕ್ಕೂ ಸಿಎಂ ರೇಸ್​ ನಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ತಡರಾತ್ರಿವರೆಗೂ ಇಬ್ಬರು ನಾಯಕರೊಂದಿಗೆ ರಾಹುಲ್​ ಗಾಂಧಿ ಸಭೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ.
ರಾಜಸ್ಥಾನದಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ ಕೆಸಿ ವೇಣುಗೋಪಾಲ್​ ಕೂಡ ನಾಯಕರುಗಳ ಮನವೊಲಿಕೆಗೆ ಪ್ರಯತ್ನ ನಡೆಸುತ್ತಿದ್ದು, ಇದು ಸುಲಭವಾಗಿ ಬಗೆಹರಿಯವು ವಿಚಾರವಲ್ಲ. ಶುಕ್ರವಾರ ಮತ್ತೆ ಈ ಬಗ್ಗೆ ಸಭೆ ನಡೆಸುತ್ತೇವೆ ಎಂದಿದ್ದಾರೆ.
ವರಿಷ್ಠರು ಗೆಹ್ಲೋಟ್​ ಪರ ಒಲವು ಹೊಂದಿರುವ ಹಿನ್ನೆಲೆಯಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿರುವ ಸಚಿನ್​, ಚುನಾವಣೆ ಸಂದರ್ಭದಲ್ಲಿ ಗೆಹ್ಲೋಟ್​ ಪಕ್ಷದ ಆಂತರಿಕ ಬಂಡುಕೋರರಿಗೆ ಸಹಕಾರ ನೀಡಿದರು. ಅನೇಕ ಕ್ಷೇತ್ರಗಳ ಸೋಲಿಗೆ ಅವರು ನೇರ ಕಾರಣಕರ್ತರಾಗಿದ್ದಾರೆ ಎಂದು ಹೈಕಮಾಂಡ್​ ಮುಂದೆ ಅವಲತ್ತುಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಬೆಳೆಸಲು ತಾವು​ ಪಟ್ಟಿರುವ ಶ್ರಮವನ್ನು ಕೂಡ ಪೈಲಟ್​ ಹೈಕಮಾಂಡ್​ ಮುಂದೆ ವಿವರಿಸಿದ್ದಾರೆ. ಹೊಸದಾಗಿ ಆಯ್ಕೆಗೊಂಡಿರುವ ಶಾಸಕರಲ್ಲಿ ಅನೇಕರು ಕೂಡ ಸಚಿನ್​ ಪರವಾಗಿ ನಿಂತಿದ್ದು, ಯಾರನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂಬುದು ರಾಹುಲ್​ಗೆ ಕಗ್ಗಂಟಾಗಿದೆ.
ಇನ್ನು ಈ ಸಮಸ್ಯೆ ಬಗೆಹರಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಗೂ ಪ್ರಿಯಾಂಕಾ ಗಾಂಧಿ ವಾರ್ದಾ ಕೂಡ ಮುಂದಾಗಿದ್ದಾರೆ. ಸಚಿನ್​ ಪರ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆ ಬೇಡ ಎಂದು ಮನವಿ ಮಾಡಿರುವ ಪೈಲಟ್​, ರಾಹುಲ್​ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆಬಾಗುವುದಾಗಿ ತಿಳಿಸಿದ್ದಾರೆ.
ಇನ್ನು ಛತ್ತೀಸ್​ಗಢದಲ್ಲೂ ಕೂಡ ಟಿಎಸ್​ ಸಿಂಗ್​ ದೇವ್ ಹಾಗೂ ಭೂಪೇಶ್​ ಬಾಗೆಲ್​ ಕೂಡ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ್​ ಖರ್ಗೆ ರಾಯಪುರದಲ್ಲಿ ಈ ಇಬ್ಬರು ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ಭೂಪೇಶ್​ ಬಾಗೆಲ್​ ಪರ ಒಲವು ವ್ಯಕ್ತವಾದರೂ, ಸಿಂಗ್​ ದೇವ್ ಪರ ಕೂಡ ಬೆಂಬಲವಿದೆ. ಬಾಗೆಲ್​ ಹೈಕಮಾಂಡ್​ ನೀಡಿದ ಯಾವುದೇ ಜವಬ್ಧಾರಿ ವಹಿಸಿಕೊಳ್ಳಲು ಸಿದ್ಧ ಎಂದು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ