ನವದೆಹಲಿ: ಮಧ್ಯ ಪ್ರದೇಶ, ಛತ್ತೀಸ್ಗಢ ಹಾಗೂ ರಾಜಸ್ಥಾನದಲ್ಲಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್ಗೆ ಈಗ ಮುಖ್ಯಮಂತ್ರಿ ಪಟ್ಟ ಯಾರಿಗೆ ಕಟ್ಟಬೇಕು ಎಂಬ ಸಮಸ್ಯೆ ಉದ್ಭವಿಸಿದೆ. ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರನ್ನು ಸಿಎಂ ಎಂದು ಈಗಾಗಲೇ ನಿರ್ಧಾರ ಮಾಡಲಾಗಿದೆ. ಆದರೆ, ರಾಜಸ್ಥಾನದ ಸಿಎಂ ಅಭ್ಯರ್ಥಿ ಆಯ್ಕೆ ಜಟಿಲವಾಗಿ ಪರಿಣಮಿಸಿದೆ. ರಾಜಸ್ಥಾನ ಮತ್ತು ಛತ್ತೀಸ್ಗಢ ರಾಜ್ಯಕ್ಕೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲು ರಾಹುಲ್ ಗಾಂಧಿ ಇಂದು ಸಭೆ ನಡೆಸಲಿದ್ದಾರೆ.
ಗುರುವಾರ ತಡರಾತ್ರಿವರೆಗೂ ಸಭೆ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶದ ಸಿಎಂ ಆಗಿ ಕಮಲನಾಥ್ ರನ್ನು ಆಯ್ಕೆ ಮಾಡುವ ಮೂಲಕ ಜ್ಯೋತಿರಾದಿತ್ಯ ಸಿಂದ್ಯಗೆ ನಿರಾಸೆ ಮೂಡಿಸಿದರು.
ಮಧ್ಯಪ್ರದೇಶ ಮುಖ್ಯಮಂತ್ರಿ ಸಮಸ್ಯೆ ಬಗೆಹರಿದರೂ ರಾಜಸ್ಥಾನ ಹಾಗೂ ಛತ್ತೀಸ್ಗಢ ರಾಜ್ಯಗಳಲ್ಲಿ ಸಿಎಂ ಯಾರು ಎಂಬ ಪ್ರಶ್ನೆಗೆ ಇನ್ನು ಉತ್ತರ ದೊರೆತಿಲ್ಲ. ಇಂದು ಕೂಡ ರಾಹುಲ್ ಗಾಂಧಿ ಸಿಎಂ ಅಭ್ಯರ್ಥಿ ಆಯ್ಕೆ ಸಂಬಂಧ ಸಭೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ ರಾಜಸ್ಥಾನದಲ್ಲಿ ಪಕ್ಷದ ನಾಯಕರು ಅಶೋಕ್ ಗೆಹ್ಲೋಟ್ ಅಧಿಕಾರದ ಚುಕ್ಕಾಣಿ ಹಿಡಿಯಲು ಬಯಸಿದ್ದಾರೆ. ಆದರೆ ಸಚಿನ್ ಪೈಲಟ್ ಯಾವುದೇ ಕಾರಣಕ್ಕೂ ಸಿಎಂ ರೇಸ್ ನಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ತಡರಾತ್ರಿವರೆಗೂ ಇಬ್ಬರು ನಾಯಕರೊಂದಿಗೆ ರಾಹುಲ್ ಗಾಂಧಿ ಸಭೆ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ.
ರಾಜಸ್ಥಾನದಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ ಕೆಸಿ ವೇಣುಗೋಪಾಲ್ ಕೂಡ ನಾಯಕರುಗಳ ಮನವೊಲಿಕೆಗೆ ಪ್ರಯತ್ನ ನಡೆಸುತ್ತಿದ್ದು, ಇದು ಸುಲಭವಾಗಿ ಬಗೆಹರಿಯವು ವಿಚಾರವಲ್ಲ. ಶುಕ್ರವಾರ ಮತ್ತೆ ಈ ಬಗ್ಗೆ ಸಭೆ ನಡೆಸುತ್ತೇವೆ ಎಂದಿದ್ದಾರೆ.
ವರಿಷ್ಠರು ಗೆಹ್ಲೋಟ್ ಪರ ಒಲವು ಹೊಂದಿರುವ ಹಿನ್ನೆಲೆಯಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿರುವ ಸಚಿನ್, ಚುನಾವಣೆ ಸಂದರ್ಭದಲ್ಲಿ ಗೆಹ್ಲೋಟ್ ಪಕ್ಷದ ಆಂತರಿಕ ಬಂಡುಕೋರರಿಗೆ ಸಹಕಾರ ನೀಡಿದರು. ಅನೇಕ ಕ್ಷೇತ್ರಗಳ ಸೋಲಿಗೆ ಅವರು ನೇರ ಕಾರಣಕರ್ತರಾಗಿದ್ದಾರೆ ಎಂದು ಹೈಕಮಾಂಡ್ ಮುಂದೆ ಅವಲತ್ತುಕೊಂಡಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಬೆಳೆಸಲು ತಾವು ಪಟ್ಟಿರುವ ಶ್ರಮವನ್ನು ಕೂಡ ಪೈಲಟ್ ಹೈಕಮಾಂಡ್ ಮುಂದೆ ವಿವರಿಸಿದ್ದಾರೆ. ಹೊಸದಾಗಿ ಆಯ್ಕೆಗೊಂಡಿರುವ ಶಾಸಕರಲ್ಲಿ ಅನೇಕರು ಕೂಡ ಸಚಿನ್ ಪರವಾಗಿ ನಿಂತಿದ್ದು, ಯಾರನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂಬುದು ರಾಹುಲ್ಗೆ ಕಗ್ಗಂಟಾಗಿದೆ.
ಇನ್ನು ಈ ಸಮಸ್ಯೆ ಬಗೆಹರಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಹಾಗೂ ಪ್ರಿಯಾಂಕಾ ಗಾಂಧಿ ವಾರ್ದಾ ಕೂಡ ಮುಂದಾಗಿದ್ದಾರೆ. ಸಚಿನ್ ಪರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನೆ ಬೇಡ ಎಂದು ಮನವಿ ಮಾಡಿರುವ ಪೈಲಟ್, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಲೆಬಾಗುವುದಾಗಿ ತಿಳಿಸಿದ್ದಾರೆ.
ಇನ್ನು ಛತ್ತೀಸ್ಗಢದಲ್ಲೂ ಕೂಡ ಟಿಎಸ್ ಸಿಂಗ್ ದೇವ್ ಹಾಗೂ ಭೂಪೇಶ್ ಬಾಗೆಲ್ ಕೂಡ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ರಾಯಪುರದಲ್ಲಿ ಈ ಇಬ್ಬರು ನಾಯಕರೊಂದಿಗೆ ಸಭೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಗೆಲ್ ಪರ ಒಲವು ವ್ಯಕ್ತವಾದರೂ, ಸಿಂಗ್ ದೇವ್ ಪರ ಕೂಡ ಬೆಂಬಲವಿದೆ. ಬಾಗೆಲ್ ಹೈಕಮಾಂಡ್ ನೀಡಿದ ಯಾವುದೇ ಜವಬ್ಧಾರಿ ವಹಿಸಿಕೊಳ್ಳಲು ಸಿದ್ಧ ಎಂದು ಈಗಾಗಲೇ ಸಮ್ಮತಿ ಸೂಚಿಸಿದ್ದಾರೆ.