ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡ ರಾಜ್ಯಗಳ ಚುನಾವಣೆಯಲ್ಲಿ ಜಯಭೇರಿ ಭಾರಿಸಿದ ನಂತರ ಯಾರಾರಿಗೆ ಸಿಎಂ ಪಟ್ಟ ಕಟ್ಟಬೇಕೆಂಬ ತಲೆಬಿಸಿಯಲ್ಲಿದ್ದ ಕಾಂಗ್ರೆಸ್ ಇಂದು ಕೊನೆಗೂ ಮಧ್ಯಪ್ರದೇಶಕ್ಕೆ ನಾಯಕನನ್ನು ಆಯ್ಕೆ ಮಾಡಿದೆ. ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ಸಿಗ ಕಮಲನಾಥ್ ಅವರನ್ನು ಆರಿಸಲಾಗಿದೆ. ಇದರೊಂದಿಗೆ ಹಿರಿಯರ-ಕಿರಿಯರ ಪೈಪೋಟಿಯಲ್ಲಿ ಹಿರಿಯರೇ ಗೆದ್ದಂತಾಗಿದೆ. ಮಾಜಿ ಸಿಎಂ ಮಾಧವರಾವ್ ಸಿಂಧ್ಯ ಅವರ ಪುತ್ರ ಜ್ಯೋತಿರಾದಿತ್ಯ ಸಿಂಧ್ಯ ಅವರೂ ಸಿಎಂ ಸ್ಥಾನದ ರೇಸ್ನಲ್ಲಿದ್ದರು. ಗುರುವಾರ ತಡ ರಾತ್ರಿ ಕಮಲನಾಥ್ ಅವರನ್ನು ಆರಿಸಲು ಕಾಂಗ್ರೆಸ್ ನಿರ್ಧರಿಸಿತು.
ಅತ್ತ, ರಾಜಸ್ಥಾನದಲ್ಲೂ ಇದೇ ಸಮಸ್ಯೆ ಇದೆ. ಹಿರಿಯ ಕಾಂಗ್ರೆಸ್ಸಿಗ ಅಶೋಕ್ ಗೆಹ್ಲೋಟ್ ಹಾಗೂ ಕಿರಿಯ ಕಾಂಗ್ರೆಸ್ಸಿಗ ಸಚಿನ್ ಪೈಲಟ್ ಮಧ್ಯೆ ಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಇದೆ. ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರಿಗೆ ಮಣೆ ಹಾಕಿದಂತೆ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಅವರನ್ನೇ ಸಿಎಂ ಆಗಿ ಆಯ್ಕೆ ಮಾಡುವ ಸಾಧ್ಯತೆ ಇಲ್ಲದೇ ಇಲ್ಲ. ಇವತ್ತು ತಡರಾತ್ರಿ ಅಂತಿಮ ನಿರ್ಧಾರ ಬರುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಅವರು ವೈಯಕ್ತಿಕವಾಗಿ ಸಚಿನ್ ಪೈಲಟ್ ಪರವಾಗಿದ್ದಾರೆನ್ನಲಾಗಿದೆ. ಆದರೆ, ಸೋನಿಯಾ ಗಾಂಧಿ ಅವರು ಇಂದು ಸಂಜೆ ತಮ್ಮ ಮಗ ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿ ತಮ್ಮ ಸಲಹೆಗಳನ್ನ ನೀಡಿರುವುದು ತಿಳಿದುಬಂದಿದೆ. ರಾಜಸ್ಥಾನದಲ್ಲಿ ಇಬ್ಬರಲ್ಲಿ ಯಾರಿಗೇ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ.
ಮಧ್ಯಪ್ರದೇಶದಲ್ಲಿ ಬಹುಮತ ಪಡೆದ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್ಗೆ ಬಹುಜನ ಸಮಾಜ ಪಕ್ಷ ಬೆಂಬಲ ನೀಡಿದೆ. 72 ವರ್ಷದ ಕಮಲನಾಥ್ಗೆ ಈಗಾಗಲೇ ಎಲ್ಲ ಕಾಂಗ್ರೆಸ್ ಶಾಸಕರು ಬೆಂಬಲ ನೀಡಿದ್ದರೆನ್ನಲಾಗಿದೆ. ಅತ್ತ ಜ್ಯೋತಿರಾದಿತ್ಯ ಸಿಂದ್ಯ ಕೂಡ ತಮಗೂ ಅಪಾರ ಬೆಂಬಲವಿದೆ ಎಂದು ಹೈ ಕಮಾಂಡ್ ಮುಂದೆ ವಾದ ಮಂಡಿಸಿದ್ದರು. ತಾವು ಕೂಡ ಮುಖ್ಯಮಂತ್ರಿಯಾಗುವ ಇರಾದೆ ಹೊಂದಿರುವುದಾಗಿ ಸಿಂದ್ಯ ತಿಳಿಸಿದ್ದರು.