ಬೆಂಗಳೂರು, ಡಿ.14- ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ನ 6ನೆ ರಾಜ್ಯ ಸಮ್ಮೇಳನವನ್ನು ಇದೇ 18ರಿಂದ ಮೂರು ದಿನಗಳ ಕಾಲ ಕಲಬುರಗಿಯಲ್ಲಿ ಆಯೋಜಿಸಲಾಗಿದೆ ಎಂದು ಫೆಡರೇಷನ್ ಅಧ್ಯಕ್ಷ ಎಂ.ಸಿ.ನರಸಿಂಹ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ಸಾರಿಗೆ ನಿಗಮಗಳನ್ನು ಖಾಸಗೀಕರಿಸುವ ನೀತಿಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ.ರಾಜ್ಯದಲ್ಲಿರುವ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ, ಎನ್ಇಕೆಆರ್ಟಿಸಿಗಳಿಂದ 500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಸಮ್ಮೇಳನವನ್ನು ಫೆಡರೇಷನ್ ಕಾರ್ಯಾಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಉದ್ಘಾಟಿಸಲಿದ್ದು, ಸಾರಿಗೆ ನೌಕರರ ರಾಷ್ಟ್ರೀಯ ಫೆಡರೇಷನ್ ಹಿರಿಯ ಉಪಾಧ್ಯಕ್ಷ ಕಾ.ಎಂ.ಎಲ್.ಯಾದವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಮ್ಮ ರಾಜ್ಯದಲ್ಲೂ ಸಹ ಕಾನೂನು ಬಾಹಿರವಾಗಿ ಖಾಸಗಿ ಬಸ್ ಮಾಲೀಕರು ವಾಹನಗಳನ್ನು ಓಡಿಸುತ್ತಿರುವುದರಿಂದ ಸಾರಿಗೆ ನಿಗಮಗಳ ಆದಾಯ ಕುಂಠಿತವಾಗಿದೆ.ಹಿಂದೆ ಇದ್ದ ಸರ್ಕಾರವು ರಾಜ್ಯದಲ್ಲಿ ಸಂಪೂರ್ಣವಾಗಿ ಸಾರಿಗೆ ನಿಗಮಗಳ ಬಸ್ ಹಾಕಲು ಕರ್ನಾಟಕ ಸಮಗ್ರ ಕ್ಷೇತ್ರ ಯೋಜನೆಯ ಪ್ರಕಟಣೆ ತಂದಿತ್ತು.ಖಾಸಗಿ ಬಸ್ ಮಾಲೀಕರು ಹೈಕೋರ್ಟ್ಗೆ ಹೋದ ಕಾರಣ ಈ ನೋಟಿಫಿಕೇಷನ್ ಜಾರಿಯಾಗಲಿಲ್ಲ. ಹೊಸ ಸರ್ಕಾರ ಇದರ ಕಡೆ ಗಮನ ಕೊಡಬೇಕೆಂದು ನಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.
ಈ ಸಮ್ಮೇಳನದಲ್ಲಿ ಸಾರಿಗೆ ನಿಗಮದ ಆಡಳಿತ ವರ್ಗದ ಸಂಘ ವಿರೋಧಿ ನೀತಿ, ದಿನನಿತ್ಯ ಕಾರ್ಮಿಕರಿಗೆ ಆಗುತ್ತಿರುವ ಹಿಂಸೆ, ಕಿರುಕುಳಗಳು ಮತ್ತು ಶಿಕ್ಷೆ ಬಗ್ಗೆ ಕೂಡ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.