ಶೇ 100ರಷ್ಟು ತೆರಿಗೆ ವಸೂಲಿ ಮಾಡುವ ಅಧಿಕಾರಗಳಿಗೆ ಪ್ರಶಂಸನಾ ಪತ್ರ

ಬೆಂಗಳೂರು,ಡಿ14-ಶೇಕಡಾ 100ರಷ್ಟು ಆಸ್ತಿ ತೆರಿಗೆ ವಸೂಲಿ ಮಾಡುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಬಿಬಿಎಂಪಿಯ ಪ್ರಮುಖ ಆದಾಯ ಮೂಲವಾಗಿರುವ ಆಸ್ತಿ ತೆರಿಗೆಯ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರದ ಆಸ್ತಿಗಳನ್ನು ತೆರಿಗೆ ಜಾಲಕ್ಕೆ ಸೇರಿಸುವ ಕುರಿತಂತೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಈಗಾಗಲೇ ಆಯಾ ವಲಯಗಳಲ್ಲಿ ಗರಿಷ್ಠ ಆಸ್ತಿ ತೆರಿಗೆ ಸಂಗ್ರಹಿಸುವ ಅಧಿಕಾರಿಗಳಿಗೆ ನಾಡಪ್ರಭು ಕೆಂಪೇಗೌಡ ದಿನಾಚರಣೆ ಸಂದರ್ಭದಲ್ಲಿ ಉತ್ತಮ ನೌಕರ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಆದರೂ ಸಮರ್ಪಕವಾಗಿ ಆಸ್ತಿ ತೆರಿಗೆ ವಸೂಲಾಗದಿರುವುದನ್ನು ಗಂಭೀರವಾಗಿ ಪರಿಗಣಿಸಿ ಶೇ.100ರಷ್ಟು ಆಸ್ತಿ ತೆರಿಗೆ ಸಂಗ್ರಹಿಸುವ ಅಧಿಕಾರಿಗಳಿಗೆ ಆಯಾ ಹಣಕಾಸು ವರ್ಷದಲ್ಲಿ ಪೂಜ್ಯ ಮಹಾಪೌರರು ಹಾಗೂ ಆಯುಕ್ತರ ಮೂಲಕ ಪ್ರಶಂಸನಾ ಪತ್ರ ನೀಡಿ ಗೌರವಿಸಲು ನಿರ್ಧರಿಸಿದ್ದೇವೆ ಎಂದು ಶಿವರಾಜ್ ತಿಳಿಸಿದರು.

ಸಮರ್ಪಕವಾಗಿ ಆಸ್ತಿ ತೆರಿಗೆ ಸಂಗ್ರಹಿಸುವ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡುವ ಕುರಿತಂತೆ ಮೇಯರ್ ಗಂಗಾಂಬಿಕೆ ಹಾಗೂ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇವೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ