ಬೆಂಗಳೂರು,ಡಿ.14- ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂಬಂಧ ಸುಗಮವಾಗಿ ನಡೆಯಬೇಕಿದ್ದ ಚುನಾವಣೆ, ಬಿಜೆಪಿಗರ ರಾಜಕೀಯ ದಾಳದಿಂದ ಗೊಂದಲದ ಗೂಡಾಗಿದೆ.
ನಿರೀಕ್ಷೆಯಂತೆ ಇಂದು 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಅವಿರೋಧ ಆಯ್ಕೆ ನಡೆಯಬೇಕಿತ್ತು. ಆದರೆ ನಗರ ಯೋಜನೆ ಸ್ಥಾಯಿ ಸಮಿತಿಗೆ ಬಿಜೆಪಿಯಿಂದ ಅಮಾನತುಗೊಂಡಿರುವ ಬೈರಸಂದ್ರ ವಾರ್ಡ್ ಸದಸ್ಯ ನಾಗರಾಜ್ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿದ್ದೇ ಗೊಂದಲದ ವಾತಾವರಣಕ್ಕೆ ಕಾರಣವಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 11ಸ್ಥಾಯಿ ಸಮಿತಿಗಳಿಗೆ 130 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.ಆ ವೇಳೆ ಬಿಜೆಪಿ ತಂತ್ರಗಾರಿಕೆಯಿಂದಾಗಿ ನಗರ ಯೋಜನೆ ಸ್ಥಾಯಿ ಸಮಿತಿಗೆ ಕೇವಲ 9 ಸದಸ್ಯರು ಮಾತ್ರ ಆಯ್ಕೆಯಾಗಿದ್ದರು.ಆ ಪೈಕಿ ಮೈತ್ರಿ ಪಕ್ಷದ ನಾಲ್ವರು ಸದಸ್ಯರಿದ್ದರೆ, ಬಿಜೆಪಿಯ 5 ಮಂದಿ ಸದಸ್ಯರಿದ್ದಾರೆ. ಈ ಹಿನ್ನೆಲೆಯಲ್ಲಿ ನಗರ ಯೋಜನೆ ಸ್ಥಾಯಿ ಸಮಿತಿಗೆ ಬಿಜೆಪಿಯೂ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ನಾಗರಾಜ್ಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ರಣತಂತ್ರ ಹೆಣೆದಿದೆ.
ಮತ್ತೊಂದೆಡೆ ಅಧ್ಯಕ್ಷ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಜೆಡಿಎಸ್ನ ಲಗ್ಗೆರೆ ವಾರ್ಡ್ನ ಮಂಜುಳಾ ನಾರಾಯಣ ಸ್ವಾಮಿ, ಬಿಟಿಎಂ ಬಡಾವಣೆಯ ದೇವದಾಸ್, ನದೀಮಾ ಖಾನಂ ಅವರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ವಿವಿಧ ಸ್ಥಾಯಿ ಸಮಿತಿಗಳಿಗೆ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಬಿಜೆಪಿ ಹೊರಟಿದೆ.
ಸಾಮಾಜಿಕ ನ್ಯಾಯ ಸಮಿತಿಗೆ ಮಂಜುಳಾ ನಾರಾಯಣಸ್ವಾಮಿ, ವಾಡ್ ್ ಮಟ್ಟದ ಕಾಮಗಾರಿ ಸಮಿತಿಗೆ ದೇವದಾಸ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗುವ ಮೂಲಕ ಮೈತ್ರಿ ಪಕ್ಷಕ್ಕೆ ಟಾಂಗ್ ಕೊಟ್ಟಿದೆ.
ಈ ಮಧ್ಯೆ ಮುಖಂಡರಾದ ರಾಮಲಿಂಗಾರೆಡ್ಡಿ, ಆರ್.ಪ್ರಕಾಶ್, ಗೋಪಾಲಯ್ಯ ಮತ್ತಿತರರು ಅಸಮಾಧಾನಿತರ ಸಮಾಧಾನಕ್ಕೆ ಯತ್ನಿಸುತ್ತಿದ್ದಾರಾದರೂ ಫಲ ಸಿಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಒಟ್ಟಾರೆ ಬಿಜೆಪಿಯ ತಂತ್ರಗಾರಿಕೆಯಿಂದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದ್ದು, ಗೊಂದಲದ ಗೂಡಾಗಿದೆ.