ನವದೆಹಲಿ: ಸತತ ಗೆಲುವಿನಿಂದ ಬೀಗುತ್ತಿದ್ದ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಿಸಿಮುಟ್ಟಿಸಿದೆ. ಐದು ರಾಜ್ಯಗಳ ಪೈಕಿ ಒಂದು ಕಡೆಯಲ್ಲೂ ಸರ್ಕಾರ ರಚಿಸಲು ಬಿಜೆಪಿ ಬಳಿ ಸಾಧ್ಯವಾಗಿಲ್ಲ. ಜನರು ನೀಡಿರುವ ತೀರ್ಪಿನಿಂದ ಎಚ್ಚೆತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕೊನೆಯ ಬಜೆಟ್ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ.
2019ರ ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಘೋಷಣೆ ಮಾಡಲಿದ್ದಾರೆ. ಈ ವೇಳೆ ಬಡವರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಸಿದ್ಧಪಡಿಸುವ ಯೋಚನೆ ಕೇಂದ್ರದ್ದು. ಬಡವರಿಗೆ ಸಾರ್ವತ್ರಿಕ ಮೂಲ ಆದಾಯ ನೀಡುವ ಆಲೋಚನೆಯನ್ನೂ ಕೇಂದ್ರ ಇಟ್ಟುಕೊಂಡಿದೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲೂ ಬಿಜೆಪಿ ಇದೇ ಮಾದರಿಯ ವಾಗ್ದಾನ ನೀಡಿತ್ತು.
ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿರುವ ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್, “ಸಾರ್ವತ್ರಿಕ ಮೂಲ ಆದಾಯ ನೀಡುವ ವಿಚಾರದ ಬಗ್ಗೆ ಜಮ್ಮು-ಕಾಶ್ಮೀರ ಸರ್ಕಾರದ ಜೊತೆ ಚರ್ಚಿಸಿದ್ದೆವು. ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೂ ಮಾತನಾಡಿದ್ದೇವೆ. ಅವರು ಇದನ್ನು ಜಾರಿಗೆ ತರಲು ಉತ್ಸುಕರಾಗಿದ್ದಾರೆ. ಇದನ್ನು ಜಾರಿ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು,” ಎನ್ನುತ್ತಾರೆ.
ಒಂದೊಮ್ಮೆ ಬಜೆಟ್ನಲ್ಲಿ ಸಾರ್ವತ್ರಿಕ ಮೂಲ ಆದಾಯ ಘೋಷಣೆ ಮಾಡಿದರೆ, ಇದು ಕೇಂದ್ರ ಸರ್ಕಾರದ ಆಡಳಿತಕ್ಕೆ ಮೈಲೇಜ್ ನೀಡಲಿದೆ ಎಂಬುದು ಕೆಲ ಬಿಜೆಪಿ ನಾಯಕರ ಅಭಿಪ್ರಾಯ. ಈಗಾಗಲೇ ಕೆನಡಾ ಹಾಗೂ ಸ್ವಿಟ್ಜರ್ಲೆಂಡ್ನಲ್ಲಿ ಈ ರೀತಿಯ ಪ್ರಯತ್ನ ನಡೆದಿದೆ. ಆದರೆ ನಮ್ಮ ದೇಶ ಸಾರ್ವತ್ರಿಕ ಮೂಲ ಆದಾಯ ನೀಡಲು ಸಿದ್ಧಗೊಂಡಿಲ್ಲ ಎಂಬುದು ಕೆಲ ತಜ್ಞರ ಅಭಿಪ್ರಾಯ.
ಏನಿದು ಸಾರ್ವತ್ರಿಕ ಮೂಲ ಆದಯ?:
ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲ ನಾಗರಿಕರಿಗೆ ಇಂತಿಷ್ಟು ಎಂದು ಹಣ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ಜೀವನ ನಡೆಸುವುದಕ್ಕೆ ಅಗತ್ಯ ಇರುವ ಕನಿಷ್ಟ ಹಣ ಒದಗಿಸುವುದು ಈ ಯೋಜನೆಯ ಉದ್ದೇಶ. ನಾಗರಿಕರಲ್ಲಿ ಸಮಾನತೆ ತರುವುದು ಮತ್ತು ಬಡತನ ನಿವಾರಿಸುವುದು ಯೋಜನೆಯ ಮೂಲ ಧ್ಯೇಯಗಳು.