ಮುಂಬೈ: ಬಾಲಿವುಡ್ ದಬಾಂಗ್ ಬೆಡಗಿ ಸೋನಾಕ್ಷಿ ಸಿನ್ಹಾ ಆನ್‍ಲೈನ್‍ನಲ್ಲಿ ಬೋಸ್ ಕಂಪನಿಯ ಹೆಡ್‍ಫೋನ್ ಬುಕ್ ಮಾಡಿದ್ದರು. ಆದರೆ ಬಾಕ್ಸ್ ತೆಗೆದ ನಂತರ ಹೆಡ್‍ಫೋನ್ ಬದಲು ಕಬ್ಬಿಣದ ವಸ್ತು ನೋಡಿ ಸೋನಾಕ್ಷಿ ರೊಚ್ಚಿಗೆದಿದ್ದಾರೆ.
ಸೋನಾಕ್ಷಿ ಅಮೆಜಾನ್‍ನಲ್ಲಿ ಬೋಸ್ ಕಂಪನಿಯ ಹೆಡ್‍ಫೋನ್ ಆರ್ಡರ್ ಮಾಡಿದ್ದರು. ಅಮೆಜಾನ್‍ನಿಂದ ಮನೆಗೆ ಬಂದ ಬಾಕ್ಸ್ ಅನ್ನು ಸೋನಾಕ್ಷಿ ತೆರೆದು ನೋಡಿದಾಗ ಅದರಲ್ಲಿ ಹೆಡ್‍ಫೋನ್ ಬದಲು ಕಬ್ಬಿಣದ ಪೀಸ್ ಇತ್ತು. ಇದನ್ನು ನೋಡಿ ಸೋನಾಕ್ಷಿ ಸಿನ್ಹಾ ರೊಚ್ಚಿಗೆದ್ದು ಟ್ವಿಟ್ಟರಿನಲ್ಲಿ ಅಮೆಜಾನ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೋನಾಕ್ಷಿ ಆನ್‍ಲೈನ್‍ನಲ್ಲಿ ಬಂದ ವಸ್ತುವಿನ ಫೋಟೋ ತೆಗೆದು ಅದನ್ನು ಟ್ವಿಟ್ಟರಿನಲ್ಲಿ ಹಾಕಿ ಅದಕ್ಕೆ, “ನಾನು ಅಮೆಜಾನ್‍ನಲ್ಲಿ ಹೆಡ್‍ಫೋನ್ ಬುಕ್ ಮಾಡಿದೆ. ಆದರೆ ಹೆಡ್‍ಫೋನ್ ಬದಲು ನನಗೆ ಈ ವಸ್ತು ಸಿಕ್ಕಿದೆ. ಈ ಪ್ಯಾಕೇಟ್ ಅಸಲಿ ಎಂದು ಕಾಣಿಸುತ್ತದೆ. ಆದರೆ ಅದು ಹೊರಗಿನಿಂದ ಮಾತ್ರ. ನಿಮ್ಮ ಗ್ರಾಹಕ ಸೇವೆ ಕೂಡ ಸಹಾಯ ಮಾಡಲು ಮುಂದಾಗುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಸೋನಾಕ್ಷಿ ಟ್ವೀಟ್‍ಗೆ ಅಮೆಜಾನ್ ಪ್ರತಿಕ್ರಿಯಿಸಿ “ಈ ರೀತಿ ಆಗಿರುವುದು ಸರಿಯಲ್ಲ ಹಾಗೂ ನಾವು ನಿಮ್ಮಲ್ಲಿ ಕ್ಷಮೆ ಕೋರುತ್ತೇವೆ. ದಯವಿಟ್ಟು ನೀವು ಸಂಪೂರ್ಣ ಮಾಹಿತಿ ನೀಡಿ ನಾವು ನಿಮ್ಮನ್ನು ಸಂರ್ಪಕಿಸುತ್ತೇವೆ” ಎಂದು ರೀ-ಟ್ವೀಟ್ ಮಾಡಿತ್ತು. ಅಮೆಜಾನ್ ಟ್ವೀಟ್ ಬಳಿಕ ಸೋನಾಕ್ಷಿ ತನ್ನ ಟ್ವಿಟ್ಟರಿನಲ್ಲಿ, “ಯಾರದರೂ 18,000 ರೂ.ಗೆ ಈ ಕಬ್ಬಿಣದ ಪೀಸ್ ಖರೀದಿಸುತ್ತೀರಾ?. ನಾನು ಇದನ್ನೇ ಮಾರಾಟ ಮಾಡುತ್ತೇನೆ. ಅಮೆಜಾನ್ ರೀತಿ ಮಾಡುವುದಿಲ್ಲ. ನೀವು ಆರ್ಡರ್ ಮಾಡಿದ ಈ ವಸ್ತುವನ್ನೇ ನೀಡುತ್ತೇನೆ” ಎಂದು ಬರೆದು ಅಮೆಜಾನ್ ಕಾಲೆಳೆದಿದ್ದಾರೆ.