ಬೆಳಗಾವಿ, ಡಿ.13- ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಎಫ್ಆರ್ಪಿ ದರ ಕೊಡಿಸಲು ಸರ್ಕಾರ ಬದ್ಧವಾಗಿದ್ದು , ಬೆಳೆಗಾರರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧ ಎಂದು ಸಕ್ಕರೆ ಹಾಗೂ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಕಳೆದ ವರ್ಷದ ಬಾಕಿ ಹಣ 17 ಕೋಟಿ ರೂ.ಇದೆ.ಈ ಹಣವನ್ನು ಸಕ್ಕರೆ ಕಾರ್ಖಾನೆಗಳಿಂದ ಬೆಳೆಗಾರರಿಗೆ ಪಾವತಿಸಲು ಈಗಾಗಲೇ ಜಿಲ್ಲಾಡಳಿತದ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ವರ್ಷದ ಎಫ್ಆರ್ಪಿ ದರಕ್ಕೆ ಖರೀದಿಸಿದ ಕಬ್ಬಿನ ಬಾಕಿ ಹಣ 17 ಕೋಟಿ ಮಾತ್ರವಿದೆ.ಈ ಹಿಂದೆ ಎಫ್ಆರ್ಪಿ ದರದಲ್ಲಿ ಖರೀದಿಸಿದ ಸುಮಾರು 2 ಸಾವಿರ ಕೋಟಿ ಹಣ ಉಳಿಸಿಕೊಂಡಿದ್ದವು.ಸಕ್ಕರೆ ಕಾರ್ಖಾನೆಗಳಿಗೆ ನೋಟೀಸ್ ನೀಡಿ ಬಾಕಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪಾವತಿಯಾಗಿದೆ.ಕೇವಲ 17 ಕೋಟಿ ರೂ.ಮಾತ್ರ ಬಾಕಿ ಉಳಿದಿದೆ ಎಂದರು.
ಈ ನಡುವೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿದಂತೆ ಬಾಕಿ ಹಣ ಪಾವತಿಸಿದ್ದು , ಇನ್ನು 17 ಕೋಟಿ ಮಾತ್ರ ಬಾಕಿ ಇದೆ. ಇದನ್ನು ಬೆಳೆಗಾರರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಒಂದು ವೇಳೆ ಎಫ್ಆರ್ಪಿ ದರದಲ್ಲಿ ಖರೀದಿಸಿದ ಕಬ್ಬಿಗೆ ಮಾಲೀಕರು ಹಣ ಪಾವತಿಸದಿದ್ದರೆ ನಿರ್ದಿಷ್ಟ ದಾಖಲೆಗಳೊಂದಿಗೆ ಸಕ್ಕರೆ ಆಯುಕ್ತರಿಗೆ ದೂರು ಸಲ್ಲಿಸಿದರೆ ಆ ಹಣವನ್ನು ಪಾವತಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹೊಸ ಯಂತ್ರ ಅಳವಡಿಕೆ: ಕಬ್ಬಿನ ಇಳುವರಿ ಪ್ರಮಾಣದಲ್ಲಿ ಆಗುತ್ತಿದ್ದ ವ್ಯತ್ಯಾಸ ತಡೆಗಟ್ಟಿ ರೈತರಿಗೆ ಅನುಕೂಲ ಮಾಡಿಕೊಡಲು ಕಬ್ಬಿನ ಇಳುವರಿ ಪ್ರಮಾಣವನ್ನು ನಿಖರವಾಗಿ ಅಳತೆ ಮಾಡಲು ಹೊಸ ಯಂತ್ರ ಅಳವಡಿಸುವುದನ್ನು ಕಾರ್ಖಾನೆಗಳಿಗೆ ಕಡ್ಡಾಯಗೊಳಿಸಲಾಗಿದೆ ಎಂದು ಜಾರ್ಜ್ ಹೇಳಿದರು.
ಗದ್ದೆಯಿಂದ ಕಾರ್ಖಾನೆಗಳಿಗೆ ಕಬ್ಬು ಸಾಗಿಸುವ ಸಾಗಣೆ ದರವನ್ನು ಪ್ರತಿ ಟನ್ಗೆ 600 ರೂ.ನಿಗದಿಪಡಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಕ್ಕರೆ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.ಆ ಸಮಿತಿ ನೀಡುವ ವರದಿ ಆಧರಿಸಿ ಸಾಗಾಣಿಕೆಯ ವಾಸ್ತವಿಕ ವೆಚ್ಚ ನಿಗದಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಬ್ಬು ಬೆಳೆಗಾರರ ವಿಚಾರದಲ್ಲಿ ಈಗಾಗಲೇ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರೈತರು-ಕಾರ್ಖಾನೆ ಮಾಲೀಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಜಾರ್ಜ್ ತಿಳಿಸಿದರು.