ಸಭಾಪತಿ ಆಯ್ಕೆ ವಿಚಾರದಲ್ಲಿ ಎಸ್.ಅರ್.ಪಾಟಿಲ್ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು, ಎಂ.ಬಿ.ಪಾಟೀಲ್

ಬೆಳಗಾವಿ, ಡಿ.13- ಸಭಾಪತಿ ಆಯ್ಕೆ ವಿಚಾರದಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಆದರೆ, ಪಕ್ಷದ ಮಾನದಂಡದಿಂದ ಅವರನ್ನು ಆಯ್ಕೆ ಮಾಡಲಾಗಿಲ್ಲ. ಸ್ವಾಭಾವಿಕವಾಗಿಯೇ ಇದು ಅವರಿಗೆ ನೋವು ತಂದಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಆರ್.ಪಾಟೀಲ್ ಅವರು ಹಿರಿಯರು. ಸಭಾಪತಿ ಹುದ್ದೆ ನಿರ್ವಹಿಸಲು ಆಸಕ್ತಿಯೂ ಇತ್ತು.ಈ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ವಿನಂತಿಯನ್ನೂ ಮಾಡಿಕೊಂಡಿದ್ದೆವು.ಆದರೆ, ಸಾಧ್ಯವಾಗಲಿಲ್ಲ ಎಂದರು.

ಉತ್ತರ ಮತ್ತು ದಕ್ಷಿಣ ಕರ್ನಾಟಕ ರಾಜ್ಯದ ಎರಡು ಕಣ್ಣುಗಳು.ಈ ಎರಡನ್ನು ಬೇರೆ ಬೇರೆ ಎಂದು ಕಾಣಬಾರದು.ರಾಜ್ಯಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಕಾಂಗ್ರೆಸ್‍ನಲ್ಲಿ ಹೆಚ್ಚು ಶಾಸಕರು ಉತ್ತರ ಕರ್ನಾಟಕದಿಂದಲೇ ಆಯ್ಕೆಯಾಗಿದ್ದಾರೆ.ಉತ್ತರ ಕರ್ನಾಟಕದಲ್ಲಿ 41 ಶಾಸಕರಿದ್ದರೂ ಐದು ಜನ ಮಾತ್ರ ಸಚಿವರಿದ್ದಾರೆ.ದಕ್ಷಿಣ ಕರ್ನಾಟಕದಲ್ಲಿ 36 ಶಾಸಕರಿದ್ದು, 9 ಜನ ಸಚಿವರಿದ್ದಾರೆ. ಇಲ್ಲೇ ತಿಳಿಯುತ್ತದೆ, ಉತ್ತರ, ದಕ್ಷಿಣ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಎಂದರು.

ಈ ತಾರತಮ್ಯ ಹೋಗಲಾಡಿಸಬೇಕು.ಪಕ್ಷದ ಪ್ರಮುಖ ಹುದ್ದೆಗಳು ಹಾಗೂ ಸರ್ಕಾರದ ಹುದ್ದೆಗಳು ಎಲ್ಲವೂ ದಕ್ಷಿಣ ಕರ್ನಾಟಕಕ್ಕೆ ಸಿಕ್ಕಿವೆ. ಇದನ್ನು ಸರಿಪಡಿಸಿ ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕಕ್ಕೂ ಮಹತ್ವ ಕೊಡಬೇಕು.ಉತ್ತರ ಭಾಗಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮುಂದಿನ ಸಿಎಲ್‍ಪಿ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ