ಬೆಳಗಾವಿ,ಡಿ.13-ಬೆಳಗಾವಿ ಮಹಾನಗರ ವಿಮಾನ ನಿಲ್ದಾಣಕ್ಕೆ ವೀರ ರಾಣಿ ಕಿತ್ತೂರು ಚೆನ್ನಮ್ಮ ಹೆಸರು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಪರಿಷತ್ನಲ್ಲಿಂದು ತಿಳಿಸಿದರು.
ಈಗಾಗಲೇ ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರಿಡುವಂತೆ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಗೆ ಶಿಫಾರಸ್ಸು ಮಾಡಲಾಗಿತ್ತು.ಆದರೆ ಇದನ್ನು ತಿರಸ್ಕರಿಸಲಾಗಿದೆ.ಮುಂದಿನ ಬಾರಿ ದೆಹಲಿಗೆ ಭೇಟಿ ನೀಡಿದ ವೇಳೆ ಖುದ್ದು ನಾನೇ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡುತ್ತೇನೆ. ಬೆಳಗಾವಿ ನಿಲ್ದಾಣಕ್ಕೆ ರಾಣಿ ಚೆನ್ಮಮ್ಮ ಹೆಸರಿಡುವುದು ಸೂಕ್ತ ಹಾಗೂ ಗೌರವವೂ ಹೌದು.ಸರ್ಕಾರದ ಸಹಮತವೂ ಇದೆ ಎಂದರು.
ಇದಕ್ಕೂ ಮುನ್ನ ಸದಸ್ಯ ಮಹಾಂತೇಶ್ ಕವಟಗಿಮಠ ಅವರು ಮಾತನಾಡಿ, ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮ ಹೆಸರಿಡಲು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.ಇದು ಈ ಭಾಗದವರ ಹಲವು ದಶಕಗಳ ಬೇಡಿಕೆಯೂ ಆಗಿದೆ.ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇನ್ನು ಶಿವಮೊಗ್ಗ ವಿಮಾನ ನಿಲ್ದಾಣದ ಭೂ ಸ್ವಾಧೀನ ಪ್ರಕ್ರಿಯೆಯನ್ನು ತಾಂತ್ರಿಕ ಕಾರಣಗಳಿಂದ ತಡೆ ಹಿಡಿಯಲಾಗಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಆಶ್ವಾಸನೆಯನ್ನು ಕುಮಾರಸ್ವಾಮಿ ನೀಡಿದರು.