ಬೆಂಗಳೂರು, ಡಿ.13- ನಾಗರೀಕರೆ ನೀವು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗೋದು ಗ್ಯಾರಂಟಿ.
ಪ್ರಭಾವಿ ಬಿಲ್ಡರ್ಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳು ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ನಗರದ ಅಭಿವೃದ್ದಿ ದೃಷ್ಟಿಯಿಂದ ಬಾಕಿ ಉಳಿಸಿಕೊಂಡಿರುವ ತೆರಿಗೆ ಪಾವತಿಸುವಂತೆ ತೆರಿಗೆ ವಂಚಕರಿಗೆ ನೋಟಿಸ್ ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅತ್ಯಧಿಕ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲೀಕರ ಆಸ್ತಿ ಜಪ್ತಿ ಮಾಡುವಂತಹ ಕಠಿಣ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ಕೋಟಿ ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರ ನೀಡಿರುವ ಸೂಚನೆ ಮೇರೆಗೆ ಬಿಬಿಎಂಪಿ ತೆರಿಗೆ ವಂಚಕರ ವಿರುದ್ದ ಜಪ್ತಿ ವಾರೆಂಟ್ ಹೊರಡಿಸಲು ನಿರ್ಧರಿಸಿದೆ.
ಆಸ್ತಿ ಜಪ್ತಿ ವೇಳೆ ಯಾವುದೇ ಪ್ರತಿರೋಧ ಎದುರಾಗದಂತೆ ನೋಡಿಕೊಳ್ಳಲು ಸಹಕರಿಸುವಂತೆ ಈಗಾಗಲೇ ಹಿರಿಯ ಪೆÇಲೀಸ್ ಅಧಿಕಾರಿಗಳೊಂದಿಗೂ ಬಿಬಿಎಂಪಿ ಮಾತುಕತೆ ನಡೆಸಿದೆ.
ಪಾಲಿಕೆ ಅಧಿಕಾರಿಗಳು ಆಸ್ತಿ ಜಪ್ತಿಗೆ ಬಂದಾಗ ಮನೆ ಮಾಲೀಕರು ಯಾವುದೇ ಕಾರಣಕ್ಕೂ ಬೀಗ ಹಾಕುವಂತಿಲ್ಲ ಎಂಬ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.ಒಂದು ವೇಳೆ ತೆರಿಗೆ ವಂಚಕರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಶಾಮೀಲಾದರೆ ಅಂಥ ಅಧಿಕಾರಿಗಳ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಐತಿಹಾಸಿಕ ನಿರ್ಧಾರಕ್ಕೆ ಬಿಬಿಎಂಪಿ ಬರಲಿದೆ.
ಕೋಟಿ ಕೋಟಿ ವಂಚನೆ:
ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಬಿಎಂಪಿ ಮೂರು ಸಾವಿರ ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಆದರೆ ಇದುವರೆಗೂ ಸಂಗ್ರಹವಾಗಿರುವುದು ಎರಡು ಸಾವಿರ ಕೋಟಿ ಮಾತ್ರ. ಉಳಿದ ಒಂದು ಸಾವಿರ ಕೋಟಿ ತೆರಿಗೆಗಳ್ಳರಲ್ಲಿ ಹಂಚಿ ಹೋಗಿರುವುದು ವಿಪರ್ಯಾಸ.
ನಗರದಲ್ಲಿ ಸುಮಾರು 20 ಲಕ್ಷ ಆಸ್ತಿಗಳಿವೆ. ಇದರಲ್ಲಿ ಕೇವಲ 16 ಲಕ್ಷ ಆಸ್ತಿ ಮಾಲೀಕರು ಮಾತ್ರ ಪ್ರಾಮಾಣಿಕವಾಗಿ ತೆರಿಗೆ ಪಾವತಿಸುತ್ತಿದ್ದಾರೆ.ಉಳಿದ ಮಾಲೀಕರು ತೆರಿಗೆ ವಂಚನೆ ಮಾಡುತ್ತಿದ್ದಾರೆ.
ತೆರಿಗೆ ವಂಚಕರಲ್ಲಿ ಬಹುಪಾಲು ಮಂದಿ ಚುನಾಯಿತ ಪ್ರತಿನಿಧಿಗಳು, ಪ್ರತಿಷ್ಠಿತ ವ್ಯಕ್ತಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳೇ ಇದ್ದಾರೆ. ಇಂತಹ ತೆರಿಗೆ ವಂಚಕರಿಗೆ ರಾಜಕಾರಣಿಗಳ ಬೆಂಬಲವಿದೆ. ಹೀಗಾಗಿ ಇದುವರೆಗೂ ವಂಚಕರಿಂದ ತೆರಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ.
ಇದೀಗ ಆಸ್ತಿ ಜಪ್ತಿ ಮಾಡುವಂತಹ ಆದೇಶ ಹೊರಡಿಸುವ ಮೂಲಕ ಬಾಕಿ ಬರಬೇಕಾದ ಒಂದು ಸಾವಿರ ಕೋಟಿ ಆಸ್ತಿ ತೆರಿಗೆ ವಸೂಲಿಗೆ ಬಿಬಿಎಂಪಿ ಮುಂದಾಗಿದೆ.