ಬೆಳಗಾವಿ(ಸುವರ್ಣಸೌಧ),ಡಿ.13- ಮೂರು ರಾಜ್ಯಗಳಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಒಂದೆಡೆ ಸಂಭ್ರಮಾಚರಣೆಯಲ್ಲಿದ್ದರೆ, ಬೆಳಗಾವಿಯಲ್ಲಿ ಅತೃಪ್ತ ಶಾಸಕರನ್ನು ಸೆಳೆಯುವ ಕಾರ್ಯಾಚರಣೆಯನ್ನು ಬಿಜೆಪಿ ಸದ್ದಿಲ್ಲದೆ ಮುಂದುವರೆಸಿರುವ ಹಿನ್ನೆಲೆ ಸಿದ್ದರಾಮಯ್ಯನವರ ವಿದೇಶ ಪ್ರವಾಸ ಮೊಟಕುಗೊಂಡಿದೆ.
ಬಿಜೆಪಿಯ ಆಪರೇಷನ್ ಕಮಲದ ಮಾಹಿತಿ ಹೈಕಮಾಂಡ್ಗೆ ಲಭ್ಯವಾಗಿರುವ ಹಿನ್ನೆಲೆಯಲ್ಲಿ ತಕ್ಷಣವೇ ವಿದೇಶ ಪ್ರವಾಸ ರದ್ದು ಗೊಳಿಸಿ ಹಿಂದಿರುಗುವಂತೆ ಖುದ್ದು ರಾಹುಲ್ ಗಾಂಧಿಯವರು ಸೂಚನೆ ನೀಡಿದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಹಿಂದಿರುಗಿದ್ದಾರೆ.
ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಸಭೆ ನಡೆಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಡಿ. 11ರಂದು ಶಾಸಕರ ಸಭೆ ಕರೆದಿದ್ದರು.ಆದರೆ ಆ ಸಭೆಗೆ ಬಹುತೇಕ ಶಾಸಕರು ಹಾಜರಾಗಲಿಲ್ಲ. ಸಂಭ್ರಮಾಚರಣೆ ಸಭೆ, ಇನ್ನಿತರ ಸಬೂಬುಗಳಾದರೆ ಬರುವುದಿಲ್ಲ. ಸಂಪುಟ ವಿಸ್ತರಣೆ ವಿಷಯದ ಬಗ್ಗೆ ಚರ್ಚಿಸುವುದಾದರೆ ಸಭೆಗೆ ಬರುತ್ತೇವೆ ಎಂದು ಸ್ಪಷ್ಟ ಸಂದೇಶ ನೀಡಿ ಸಭೆಯಿಂದ ದೂರ ಉಳಿದಿದ್ದರು ಎನ್ನಲಾಗಿದೆ.
ಅಲ್ಲದೇ ಶಾಸಕರ ಸಭೆ ಕರೆಯುವುದಾದರೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕರೆಯಬೇಕು.ಅಧ್ಯಕ್ಷರು ಕರೆದಿರುವುದು ಎಷ್ಟು ಸೂಕ್ತ ಎಂದು ಹಲವರು ಪ್ರಶ್ನೆ ಕೂಡ ಮಾಡಿದ್ದಾರೆ.ಇದಲ್ಲದೆ ಅಧಿವೇಶನದ ಸಂದರ್ಭದಲ್ಲಿ ಹಲವು ಅತೃಪ್ತ ಶಾಸಕರು ಕೈಗೆ ಸಿಗುತ್ತಿಲ್ಲ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಚಿವಾಕಾಂಕ್ಷಿಗಳು ಬಿಜೆಪಿ ಮುಖಂಡರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.ಯಡಿಯೂರಪ್ಪ, ಈಶ್ವರಪ್ಪ, ಆರ್.ಅಶೋಕ್ ಮುಂತಾದವರು ಅಧಿವೇಶನದಲ್ಲಿ ಪಾಲ್ಗೊಂಡರೆ, ಇನ್ನಿತರೆ ಬಿಜೆಪಿ ಮುಖಂಡರು ಅತೃಪ್ತರನ್ನು ಸೆಳೆಯುವ ತಂತ್ರ ಹೆಣೆದಿರುವ ಮಾಹಿತಿ ಹೈಕಮಾಂಡ್ಗೆ ಲಭ್ಯವಾಗಿದೆ.
ಅದರಲ್ಲೂ ಸಿದ್ದರಾಮಯ್ಯ ಬೆಂಬಲಿಗರು ಅಧ್ಯಕ್ಷರು ಕರೆದ ಸಭೆಗೆ ಹಾಜರಾಗಿಲ್ಲ. ಶಾಸಕಾಂಗ ಪಕ್ಷದ ನಾಯಕರಿಗಿಂತ ಪಕ್ಷದ ಅಧ್ಯಕ್ಷರು ಸುಪ್ರೀಂ ಆಗಿರುತ್ತಾರೆ.ಅವರು ಕರೆದ ಸಭೆಗೆ ಶಾಸಕರು ಹಾಜರಾಗಬೇಕು.ಆದರೆ, ಬಹುತೇಕ ಶಾಸಕರ ಚಟುವಟಿಕೆಗಳು ಅನುಮಾನಕ್ಕೆ ಕಾರಣವಾಗಿದೆ ಎಂಬ ವರದಿಯನ್ನು ದಿನೇಶ್ ಗುಂಡುರಾವ್ ಹೈಕಮಾಂಡ್ಗೆ ರವಾನಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ಸಿದ್ದರಾಮಯ್ಯನವರಿಗೆ ಫೆÇೀನಾಯಿಸಿ ಕೂಡಲೇ ರಾಜ್ಯಕ್ಕೆ ಹಿಂದಿರುಗಿ ಪರಿಸ್ಥಿತಿಯನ್ನು ನಿಭಾಯಿಸುವಂತೆ ಸೂಚಿಸಿದ್ದಾರೆ.ಅದಕ್ಕಾಗಿ ನಿನ್ನೆಯೇ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಸಿದ್ದರಾಮಯ್ಯ ರಾಜ್ಯಕ್ಕೆ ಹಿಂದಿರುಗಿದ್ದಾರೆ.
ಸಂಪುಟ ವಿಸ್ತರಣೆಯಾಗದಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಭಿನ್ನಮತದ ಲಾಭ ಪಡೆದು ಅತೃಪ್ತರನ್ನು ಸೆಳೆದು ಸರ್ಕಾರ ರಚಿಸುವ ಪ್ರಯತ್ನವನ್ನು ಮುಂದುವರೆಸಿರುವ ಭಾಗವಾಗಿ ಬೆಳಗಾವಿಯಲ್ಲಿ ಬಿಜೆಪಿ ತನ್ನ ಕಾರ್ಯಾಚರಣೆಯನ್ನು ನಡೆಸಿರುವುದು ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಕಾಂಗ್ರೆಸ್ ಕೂಡ ಬಿಜೆಪಿ ರಣತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿದೆ.