ನಮ್ಮ ಮೆಟ್ರೋ ಸಂಚಾರದಲ್ಲಿ ಇಂದು ವ್ಯತ್ಯಯ ಸಾಧ್ಯತೆ !

ಬೆಂಗಳೂರು: ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ದುರಸ್ತಿ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಮೆಟ್ರೋ ಸಂಚಾರದಲ್ಲಿ ಇಂದು ವ್ಯತ್ಯಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಿನಿಟಿ ಬಳಿ ಮೆಟ್ರೋ ಕಂಬದಲ್ಲಿ ಬಿರುಕು ಬಿಟ್ಟ ಬಗ್ಗೆ ವರದಿಯಾಗಿತ್ತು. ಇದರಿಂದ ಎಚ್ಚೆತ್ತಿರುವ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ನಿನ್ನೆ ರಾತ್ರಿ ಮೆಟ್ರೋ ಸಂಚಾರ ಪೂರ್ಣಗೊಂಡ ನಂತರದಲ್ಲಿ ರಿಪೇರಿ ಕಾರ್ಯ ಆರಂಭಿಸಲಾಗಿತ್ತು. ರಾತ್ರಿಯಿಡೀ ಮೆಟ್ರೋ ಸಿಬ್ಬಂದಿ ದುರಸ್ತಿ ಕೆಲಸದಲ್ಲಿ ತೊಡಗಿದ್ದರು. ಬಿರುಕು ಬಿಟ್ಟ ಪಿಲ್ಲರ್​ಗೆ​ ಹೊಂದಿಕೊಂಡಿರುವ ಎರಡು ಭಾಗದಲ್ಲಿ ಸಪೋರ್ಟಿಂಗ್ ಸ್ಟ್ರಕ್ಚರ್​ ಅಳವಡಿಸಲಾಗಿದೆ.

ದುರಸ್ತಿ ಕೆಲಸ ನಡೆಯುತ್ತಿರುವುದರಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಬಹುದು ಎಂದು ಮೆಟ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ‘ಎಂಜಿ ರಸ್ತೆಯಿಂದ ಮೈಸೂರು ರಸ್ತೆಯವರೆಗೆ ಮೆಟ್ರೋ ಸಂಚಾರ ಮಾಡಲಿದೆ. ಆದರೆ ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯವಾಗಲಿದೆ. ರಿಪೇರಿ ಕೆಲಸ ಪೂರ್ಣಗೊಂಡ ನಂತರದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು’ ಎಂದು ಮೆಟ್ರೋ ಪಿಆರ್​ಒ ಯಶ್ವಂತ್​ ಚೌಹಾಣ್​ ತಿಳಿಸಿದ್ದಾರೆ.

ಮೆಟ್ರೋ ಕಂಬದಲ್ಲಿ ಬಿರುಕು ಬಿಟ್ಟ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ‘ಬೆಂಗಳೂರು ಮೆಟ್ರೋ ಪಿಲ್ಲರ್ ವಿಚಾರವಾಗಿ ಮೊನ್ನೆಯೇ ನನಗೆ ಮಾಹಿತಿ‌ಬಂದಿದೆ. ತಜ್ಞರನ್ನು ಕರೆಸಿ ಮಾತುಕತೆ ನಡೆಸಿ, ತನಿಖೆ ನಡೆಸಲಾಗಿದೆ. ಆ ಮಾರ್ಗದಲ್ಲಿ ಮೆಟ್ರೋ ಸ್ಥಗಿತಕ್ಕೆ ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಅನಾಹುತವಾಗದಂತೆ ನೋಡಿಕೊಳ್ಳಲು ತಿಳಿಸಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ