ಪರ್ತ್: ಇಡೀ ಕ್ರಿಕೆಟ್ ಜಗತ್ತೆ ಕಾದು ಕುಳಿತಿರುವ ಇಂಡೋ- ಆಸಿಸ್ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಪರ್ತ್ ಅಂಗಳದಲ್ಲಿ ಆರಂಭವಾಗಲಿದೆ.
ಮೊನ್ನೆ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪಡೆ 31 ರನ್ಗಳ ಜಯಭೇರಿ ಬಾರಿಸಿ ಗೆದ್ದು ಬೀಗಿತ್ತು. ಇತ್ತ ಆಸ್ಟ್ರೇಲಿಯಾ ತಂಡ ಮೊದಲ ಪಂದ್ಯದಲ್ಲಿ ಸೋತು ಗಾಯಗೊಂಡ ಹುಲಿಯಂತಾಗಿದೆ.
ಪರ್ತ್ ಟೆಸ್ಟ್ ಟೀಂ ಇಂಡಿಯಾಕ್ಕೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. ಯಾಕಂದ್ರೆ ಪರ್ತ್ ಅಂಗಳದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಇದುವರೆಗೂ ಟೀಂ ಇಂಡಿಯಾ ನಾಲ್ಕು ಬಾರಿ ಮುಖಾಮುಖಿಯಾಗಿದೆ. ಈ ನಾಲ್ಕು ಮುಖಾಮುಖಿಯಲ್ಲಿ ಭಾರತ 1 ಬಾರಿ ಗೆದ್ದರೆ ಆಸ್ಟ್ರೇಲಿಯಾ 3 ಬಾರಿ ಗೆದ್ದಿದೆ.ಈ ಕಾರಣಕ್ಕಾಗಿ ಭರ್ಜರಿ ಫಾರ್ಮ್ನ್ಲಿರುವ ಕೊಹ್ಲಿ ಪಡೆ ಮತ್ತು ಬರೀ ಕಳಪೆ ಪ್ರದರ್ಶನ ನೀಡುತ್ತಿರುವ ಆಸಿಸ್ ನಡುವಿನ ಕದನ ಭಾರೀ ಕುತೂಹಲ ಕೆರೆಳಿಸಿದೆ.
ವೇಗಿಗಳ ಸ್ವರ್ಗ ಪರ್ತ್ ಅಂಗಳ
ಎರಡನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ ಆರಂಭವಾಗಲಿ ಪರ್ತ್ ಅಂಗಳ ವೇಗಿಗಳ ಸ್ವರ್ಗವಾಗಿದೆ. ವೇಗಿಗಳಿಗೆ ಪಿಚ್ ನೆರವು ನೀಡೋದ್ರಿಂದ ಪಂದ್ಯದ ಗೆಲುವು ವೇಗಿಗಳ ಮೇಲೆ ನಿಂತಿದೆ. ಟೀಂ ಇಂಡಿಯಾ ವೇಗಿಗಳು ಮೊನ್ನೆ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಸೊಗಸಾದ ಬೌಲಿಂಗ್ ಮಾಡಿ ಮಿಂಚಿದ್ದರು. ಇನ್ನು ಆಸ್ಟ್ರೇಲಿಯಾ ವೇಗಿಗಳು ವೈಫಲ್ಯ ಅನುಭವಿಸಿದ್ದು ಆಸಿಸ್ಗೆ ದೊಡ್ಡ ಹೊಡೆತ ನೀಡಿದೆ.