ಬೆಳಗಾವಿ,ಡಿ.13-ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿರುವ ಕಾರಣ ಬೆಳಗಾವಿಯಲ್ಲೂ ಕಮಲ ಪಕ್ಷದ ನಾಯಕರಲ್ಲಿ ಸೂತಕದ ಛಾಯೆ ಆವರಿಸಿದೆ.
ಕೇವಲ ಕಾಟಾಚಾರಕ್ಕಷ್ಟೆ ಕಲಾಪದಲ್ಲಿ ಭಾಗವಹಿಸುತ್ತಿದ್ದಾರೆ ಹೊರತು ಯಾರೊಬ್ಬರಲ್ಲೂ ಲವಲವಿಕೆ, ಉತ್ಸಾಹ ಹಾಗೂ ಆತ್ಮವಿಶ್ವಾಸ ಕಂಡುಬರುತ್ತಿಲ್ಲ.
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‍ಘಡದಲ್ಲಿ ಪುನಃ ಬಿಜೆಪಿಯೇ ಅಧಿಕಾರಕ್ಕೆ ಬಂದಿದ್ದರೆ ಫಲಿತಾಂಶವು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಬಹುದೆಂಬ ನಿರೀಕ್ಷೆಯನ್ನು ಬಿಜೆಪಿ ನಾಯಕರು ಇಟ್ಟುಕೊಂಡಿದ್ದರು.
ಆದರೆ ಫಲಿತಾಂಶ ಸಂಪೂರ್ಣವಾಗಿ ಉಲ್ಟ ಹೊಡೆದಿರುವುದರಿಂದ ಬಿಜೆಪಿ ನಾಯಕರಲ್ಲಿ ಬರಬಡಿತದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಮಾಕಾವಸ್ಥೆಗೆ ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಸರ್ಕಾರದ ವಿರುದ್ದ ಗಟ್ಟಿ ಧ್ವನಿಯಲ್ಲಿ ಏನೂ ಕೇಳಲಾಗದಂತಹ ಪರಿಸ್ಥಿತಿಯಲ್ಲಿದ್ದಾರೆ.
ಈ ಅಧಿವೇಶನದೊಳಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರದ ಭಿನ್ನಮತ ತಾರಕಕ್ಕೇರಲಿದೆ. ಅದರ ಲಾಭವನ್ನು ನಾವು ಪಡೆದುಕೊಂಡು ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದ್ದರು ಬಿಜೆಪಿ ನಾಯಕರು.
ಅಧಿವೇಶನದಲ್ಲಿ ಪಾಲ್ಗೊಳ್ಳದಿದ್ದರೆ ಬಿಜೆಪಿ ಉತ್ತರಕರ್ನಾಟಕದ ವಿರೋಧಿ ಎಂಬ ಹಣಪಟ್ಟಿ ಕಟ್ಟಿಕೊಳ್ಳಬೇಕಾಗುತ್ತದೆ.ಮುಂದಿನ ಲೋಕಸಭೆ ಚುನಾವಣೆಗೆ ಇದು ಪರಿಣಾಮ ಬೀರಬಹುದು.ಹೀಗಾಗಿಯೇ ಕಲಾಪದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ಸೋಮವಾರ ಇದ್ದಂತಹ ಉತ್ಸಾಹ, ಆವೇಷ ಮಂಗಳವಾರ ಫಲಿತಾಂಶ ಪ್ರಕಟಗೊಂಡ ಬಳಿಕ ಇಳಿಮುಖವಾಗಿದೆ.