ಬೆಳಗಾವಿ,ಡಿ.13-ಬೆಂಗಳೂರು ಮಹಾನಗರದಲ್ಲಿ ತಾಂತ್ರಿಕ ಮತ್ತು ಇತರೆ ಕಾರಣಗಳಿಂದ ವಿದ್ಯುತ್ ಸಮಸ್ಯೆಯಾಗುತ್ತಿದೆ ಹೊರತು ಇಲ್ಲಿ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ ಎಂದು ಇಂಧನ ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ವಿಧಾನಪರಿಷತ್ನಲ್ಲಿಂದು ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ನಗರದಲ್ಲಿ ಸರ್ಕಾರ ಲೋಡ್ ಶೆಡ್ಡಿಂಗ್ ಮಾಡುತ್ತಿದೆ ಎಂಬುದು ಕೇವಲ ವದಂತಿ. ಅಲ್ಲಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿರುವಾಗ ಇಲ್ಲವೆ ಬೇರೆ ಕೆಲಸದ ಸಂದರ್ಭಗಳಲ್ಲಿ ಮಾತ್ರ ವಿದ್ಯುತ್ ಕಡಿತ ಮಾಡಲಾಗುತ್ತಿದೆ.ಇದನ್ನು ಲೋಡ್ಶೆಡ್ಡಿಂಗ್ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಮ್ಮಲ್ಲೇ ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿದ್ದೇವೆ. 2018-19ನೇ ಸಾಲಿಗೆ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ತುಮಕೂರು ಜಿಲ್ಲೆ ಪಾವಗಡದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪಾರ್ಕ್ನಿಂದ 600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿತ್ತು.ಈಗ ಇದರಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.ರಾಜ್ಯ ಮುಂದಿನ ದಿನಗಳಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಹೊಂದಲಿದ್ದು, ಬೇರೆ ರಾಜ್ಯಗಳಿಗೆ ಮಾರಾಟ ಮಾಡುವ ಸಾಮಥ್ರ್ಯ ಹೊಂದಲಿದ್ದೇವೆ ಎಂದರು.