ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು; ಸುಪ್ರೀಂಕೋರ್ಟ್​​ನಲ್ಲಿ ಇಂದು ಮಹತ್ವದ ಅರ್ಜಿ ವಿಚಾರಣೆ

ನವದೆಹಲಿ: ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಂಪ್ರಿಕೋರ್ಟ್​​ಗೆ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ಕ್ಯಾತೆ ತೆಗೆದಿತ್ತು. ಕೇಂದ್ರ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಸೂಚಿಸಿ ಎಂದು ಸುಂಪ್ರಿಕೋರ್ಟ್​​ ಬಳಿ ಮನವಿ ಮಾಡಿತ್ತು. ಈ ಅರ್ಜಿ ವಿಚಾರಣೆ ಇಂದು ನಡೆಯಲಿದ್ದು, ಬಹಳ ಮಹತ್ವ ಪಡೆದುಕೊಂಡಿದೆ.

ಇನ್ನು, ನ್ಯಾಯಾಂಗ ನಿಂದನೆ ಆರೋಪವನ್ನೂ ತಮಿಳುನಾಡು ಮಾಡಿದೆ. ಕೇಂದ್ರ ಜಲ ಆಯೋಗದ ಅಧ್ಯಕ್ಷ ಮಸೂದ್ ಹುಸೇನ್, ರಾಜ್ಯ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಇನ್ನಿಬ್ಬರು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಾಗಿದ್ದು, ಅವುಗಳ ವಿಚಾರಣೆಯೂ ನಡೆಯಲಿದೆ.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮೇಕೆದಾಟು ಯೋಜನೆಗೆ ರೂಪುರೇಷೆ ಸಿದ್ಧಪಡಿಸಿತ್ತು. ಯೋಜನೆಗೆ ಅನುಮತಿ ಕೋರಿ ರಾಜ್ಯ ಕೇಂದ್ರದ ಬಳಿ ಮನವಿ ಮಾಡಿತ್ತು. ಅಂದು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಯೋಜನೆಗೆ ತಡೆ ನೀಡುವಂತೆ ಕೇಂದ್ರದ ಬಳಿ ಮನವಿ ಮಾಡಿದ್ದರು. ಹಾಗಾಗಿ ಯೋಜನೆ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಇತ್ತೀಚೆಗೆ ಪ್ರಧಾನಿ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ಯೋಜನೆ ಅನುಷ್ಠಾನದ ಅಗತ್ಯತೆಯನ್ನು ಮನವರಿಕೆ ಮಾಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ