ಚೆನ್ನೈ, ಡಿ.12-ರಜನಿಕಾಂತ್ ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ತಮಿಳುನಾಡಿನ ಮೆಗಾಸ್ಟಾರ್ ಆಗಿ ಬೆಳದ ಪರಿ ಅಚ್ಚರಿ ಮೂಡಿಸುತ್ತದೆ. ಇಂದು ರಜನಿಗೆ 68ನೇ ಜನ್ಮದಿನದ ಸಡಗರ-ಸಂಭ್ರಮ.
ರಜನಿಕಾಂತ್ ಎಂದೇ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಶಿವಾಜಿ ರಾವ್ ಗಾಯಕ್ವಾಡ್ ಜನಿಸಿದ್ದು ಡಿಸೆಂಬರ್ 12, 1950ರಲ್ಲಿ. ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವಿಸ್-ಬಿಟಿಎಸ್ನಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜನಿ ನಾಟಕದಲ್ಲಿ ಅಭಿನಯಿಸುತ್ತಿದ್ದರು. 1973ರಲ್ಲಿ ಮದ್ರಾಸ್ ಫಿಲ್ಮ್ ಇನ್ಸ್ಸ್ಟಿಟ್ಯೂಟ್ನಲ್ಲಿ ನಟನೆಯಲ್ಲಿ ಡಿಪೋಮಾ ಪಡೆದರು.
ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಬಾಲಚಂದರ್ ಅವರ ನಿರ್ದೇಶನದ ಅಪೂರ್ವ ರಾಗಂಗಳ್ ರಜನಿ ಅಭಿನಯದ ಮೊದಲ ಚಿತ್ರ. 1975ರಲ್ಲಿ ತೆರೆಕಂಡ ಈ ಸಿನಿಮಾ ಸೂಪರ್ಹಿಟ್ ಆಯಿತು. ಆರಂಭದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಜನಿ ತಮ್ಮ ವಿಭಿನ್ನ ಶೈಲಿ ಮತ್ತು ನಟನಾ ಕೌಶಲ್ಯದಿಂದ ಚಿತ್ರರಸಿಕರ ಗಮನಸೆಳೆದರು.
ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್ 2007ರಲ್ಲಿ ಶಿವಾಜಿ ಚಿತ್ರದಲ್ಲಿ ಪಡೆದ ಸಂಭಾವನೆ 26 ಕೋಟಿ ರೂ.ಗಳು. ಇದು ಏಷ್ಯಾದಲ್ಲೇ ಅತ್ಯಧಿಕ ಸಂಭಾವನೆ ಪಡೆದ ಎರಡನೇ ಚಿತ್ರನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಜಾಕಿ ಚಾನ್ ನಂತರ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟರಾಗಿದ್ದರು. 1988ರಲ್ಲಿ ರಜನಿ ಬ್ಲಡ್ಸ್ಟೋನ್ ಎಂಬ ಅಮೆರಿಕನ್ ಸಿನಿಮಾದಲ್ಲಿ ನಟಿಸಿದರು.
ತಲೈವಾ ಎಂದೇ ತಮಿಳುನಾಡಿನ ಅಭಿಮಾನಿಗಳಲ್ಲಿ ಆರಾಧ್ಯದೈವದಂತಿರುವ ರಜನಿ ನಟಿಸಿದ ಬಹುತೇಕ ಚಿತ್ರಗಳು ಸೂಪರ್ಹಿಟ್ ಆಗಿವೆ. ಕಳೆದ ವಾರ ತೆರೆಕಂಡ ರಜನಿ ಅಭಿನಯದ 2.0 ಸಿನಿಮಾ ಒಂದೇ ವಾರದಲ್ಲಿ 150 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮೂಲಕ ಹೊಸ ದಾಖಲೆಯತ್ತ ದಾಪುಗಾಲು ಹಾಕುತ್ತಿದೆ. ಇದು ರಜನಿ ಜನ್ಮದಿನಕ್ಕೆ ಡಬಲ್ ಧಮಾಕಾದ ಖುಷಿ ನೀಡಿದೆ.
2014ರವರೆಗೆ ರಜನಿಕಾಂತ್ ಆರು ತಮಿಳುನಾಡು ರಾಜ್ಯ ಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಚಿತ್ರ ನಿರ್ಮಾಪಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.
2006ರಲ್ಲಿ ಅವರು ಪದ್ಮ ಭೂಷಣ, 2016ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2014ರಲ್ಲಿ ನಡೆದ 45ನೇ ಅಂತಾರಾಷ್ಟ್ರೀಯ ಭಾರತ ಚಲನಚಿತ್ರೋತ್ಸವದಲ್ಲಿ ಅವರಿಗೆ ವರ್ಷದ ಶತಮಾನದ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಾಜಕೀಯ ರಂಗಕ್ಕೆ ಧುಮಕಲು ಸೂಕ್ತ ಸಮಯದ ನಿರೀಕ್ಷೆಯಲ್ಲಿರುವ ರಜನಿ ಈಗಾಗಲೇ ತಮಿಳುನಾಡು ರಾಜಕೀಯ ರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಘವೇಂದ್ರ ಸ್ವಾಮಿಗಳ ಪರಮಭಕ್ತರೂ ಆದ ರಜನಿಕಾಂತ್, ಶಿರಡಿ ಸಾಯಿಬಾಬಾರ ಅಪ್ಪಟ್ಟ ಅನುಯಾಯಿಗಳೂ ಆಗಿದ್ದಾರೆ, ತಲೈವ ಆಧ್ಯಾತ್ಮಿಕ ಚಿಂತಕರಾಗಿಯೂ ಗುರುತಿಸಿಕೊಂಡಿದ್ದಾರೆ.
ರಜನಿ ಜನ್ಮದಿನದ ಪ್ರಯುಕ್ತ ತಮಿಳುನಾಡಿನಲ್ಲಿ ಇಂದು ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ. ರಾಜ್ಯದ ವಿವಿಧೆಡೆ ತಲೈವಾ ಹುಟ್ಟುಹಬ್ಬದ ಪ್ರಮುಕ್ತ ಅಸಂಖ್ಯಾತ ಅಭಿಮಾನಿಗಳು ಅರ್ಥಪೂರ್ಣ ಕಾರ್ಯಗಳನ್ನು ಆಯೋಜಿಸಿ ಸಮಾಜ ಸೇವೆಯಲ್ಲಿ ತೊಡಗಿದರು.