ಮೆಟ್ರೋ ಮಾರ್ಗದಲ್ಲಿ ಬಿರುಕು, ಪ್ರಯಾಣಿಕರಲ್ಲಿ ಆತಂಕ

ಬೆಂಗಳೂರು,ಡಿ.12-ನಮ್ಮ ಮೆಟ್ರೋ ಮಾರ್ಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
ಎಂ.ಜಿ.ರಸ್ತೆಯ ಟ್ರಿನಿಟಿ ಮೆಟ್ರೋ ಸ್ಟೇಷನ್ ಬಳಿ ಮೆಟ್ರೋ ಮಾರ್ಗದ ಬೀಮ್ ಇಬ್ಭಾಗವಾಗಿದೆ.

ಈ ಸ್ಟೇಷನ್‍ನ 155ನೇ ಪಿಲ್ಲರ್ ಮೇಲೆ ರೈಲ್ವೆ ಟ್ರ್ಯಾಕ್‍ನ ಬೀಮ್ ಬಿರುಕು ಬಿಟ್ಟಿದೆ. ಬಿರುಕು ಬಿಟ್ಟಿರುವುದು ಗೊತ್ತಾದ ಕೂಡಲೇ ಬಿಎಂಆರ್‍ಸಿಎಲ್ ಸಿಬ್ಬಂದಿ ಬೀಮ್‍ಗೆ ಜಾಕ್ ಕೊಡುವ ಕಾರ್ಯಕ್ಕೆ ಮುಂದಾಗಿದ್ದಾರೆ.ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಬೀಮ್‍ನ ಒಂದು ಭಾಗಕ್ಕೆ ಜಾಕ್ ಕೊಟ್ಟ ನಂತರ ಇನ್ನೊಂದು ಭಾಗದ ಬೀಮ್‍ಗೂ ಸಿಬ್ಬಂದಿ ಜಾಕ್ ಕೊಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇದರಿಂದಾಗಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.ಟ್ರಿನಿಟಿ ಮೆಟ್ರೋ ಸ್ಟೇಷನ್‍ನಲ್ಲಿ ರೈಲುಗಳು ನಿಧಾನವಾಗಿ ಚಲಿಸುತ್ತಿವೆ. 15 ನಿಮಿಷಕ್ಕೆ ಒಂದರಂತೆ ರೈಲುಗಳನ್ನು ಬಿಡಲಾಗುತ್ತಿದೆ. ಮೆಟ್ರೋ ಬೀಮ್‍ನಲ್ಲಿ ಜಾಕ್ ಅಳವಡಿಸುವ ಕಾರ್ಯ ನಡೆಯುತ್ತಿರುವುದರಿಂದ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವಂತಾಯಿತು.

ಪ್ರತಿಕ್ರಿಯೆ: ಬೆಂಗಳೂರಿನ ನಮ್ಮ ಮೆಟ್ರೋ ಮಾರ್ಗದ ಪಿಲ್ಲರ್‍ನಲ್ಲಿ ಬಿರುಕು ಕಾಣಿಸಿಕೊಂಡಿರುವುದಕ್ಕೆ ಕಾರಣ ಕೇಳಿದ್ದೇನೆ. ಜನರಿಗೆ ತೊಂದರೆಯಾಗದಂತೆ ಅದನ್ನು ದುರಸ್ತಿ ಪಡಿಸುವಂತೆ ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿ ಅಧಿವೇಶನದ ವೇಳೆ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ದಿನಗಳ ಹಿಂದೆಯೇ ನನಗೆ ಈ ಬಗ್ಗೆ ಮಾಹಿತಿ ಬಂದಿದೆ.ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.ಟ್ರಿನಿಟಿ ಸ್ಟೇಷನ್‍ನ ಆ ಒಂದು ಲೈನ್‍ನನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದೇನೆ. ರಾಜ್ಯದ ಸಣ್ಣಪುಟ್ಟ ಸಮಸ್ಯೆಗಳೂ ಕೂಡ ಸರ್ಕಾರದ ಗಮನಕ್ಕೆ ಬರುತ್ತವೆ ಎಂದು ಹೇಳಿದರು.

ಪರಮೇಶ್ವರ್ ಪ್ರತಿಕ್ರಿಯೆ:
ಮೆಟ್ರೋ ಪಿಲ್ಲರ್‍ನಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ