ಶಾಸಕರ ಭವನದ ಮೇಲೆ ಸೋಲಾರ್ ಪವರ್ ಪ್ಲಾಂಟೇಷನ್, ಅನುಮತಿ ನೀಡಿದ ಸಚಿವಾಲಯ

ಬೆಂಗಳೂರು, ಡಿ.12- ವಿಧಾನಸೌಧದ ಅಣತಿ ದೂರದಲ್ಲಿರುವ ಶಾಸಕರ ಭವನದ ಮೇಲೆ ಸೋಲಾರ್ ಪವರ್ ಪ್ಲಾಂಟೇಷನ್ ಮಾಡಲು ಸಚಿವಾಲಯ ಅನುಮತಿ ನೀಡಿದೆ.

ಸುರಕ್ಷಿತ ವಲಯ (ರೆಡ್‍ಜೋನ್)ದಲ್ಲಿ ಯಾವುದೇ ಅನುಮತಿ ಇಲ್ಲದೆ ಶಾಸಕರ ಭವನದ ಮೇಲೆ 25 ವರ್ಷಕ್ಕೆ ಸೋಲಾರ್ ಪವರ್ ಪ್ಲಾಂಟೇಷನ್ ಮಾಡಲು ಹೈದರಾಬಾದ್ ಮೂಲದ ಕಂಪೆನಿಗೆ ಸಚಿವಾಲಯ ಗುತ್ತಿಗೆ ನೀಡಿದೆ.

ವಿಧಾನಸಭೆ ನಿರ್ದೇಶಕಿ ಎಂ.ಕೆ.ವಿಶಾಲಾಕ್ಷಿ ಅವರು ಮಿತ್ರ ಎನರ್ಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿ ಜತೆಗೆ ಸೋಲಾರ್ ಪವರ್ ಪ್ಲಾಂಟೇಷನ್ ಅಳವಡಿಕೆ ಸಂಬಂಧ ಒಡಂಬಡಿಕೆ ಮಾಡಿಕೊಂಡಿದ್ದಾರೆ.

ನೂರು ಕೋಟಿಯ ಈ ಯೋಜನೆಯಿಂದ ಸರ್ಕಾರಕ್ಕೆ ಒಂದು ರೂಪಾಯಿಯ ಲಾಭವೂ ಇಲ್ಲ. ಟೆಂಡರ್ ಕರೆಯದೆ ಏಕಾಏಕಿ ಸಚಿವಾಲಯ ಗುತ್ತಿಗೆ ನೀಡಿದೆ.ಸರ್ಕಾರಕ್ಕೆ ಯಾವ ಲಾಭವಿಲ್ಲದೆ ಈ ಗುತ್ತಿಗೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

600 ಕೆವಿ ವಿದ್ಯುತ್ ಉತ್ಪಾದನೆಗಾಗಿ ಪವರ್ ಪ್ಲಾಂಟೇಷನ್ ಗುತ್ತಿಗೆ ನೀಡಲಾಗಿದೆ.ಸರ್ಕಾರಕ್ಕೆ ಒಂದು ಯುನಿಟ್‍ಗೆ 3.83ರೂ.ಗೆ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಳ್ಳಲಾಗಿದೆ.ರಿಯಾಯಿತಿ ದರದಲ್ಲಿ ವಿದ್ಯುತ್ ಪಡೆಯುವ ಒಂದೇ ಕಾರಣದಿಂದ ಈ ಗುತ್ತಿಗೆ ನೀಡಲಾಗಿದೆ. ಅದನ್ನು ಹೊರತುಪಡಿಸಿದರೆ ಸರ್ಕಾರಕ್ಕೆ ಇದರಿಂದ ಭರ್ಜರಿ ನಷ್ಟ ಎಂದೇ ಹೇಳಲಾಗುತ್ತಿದೆ.

ಪರಿಸರ ಇಲಾಖೆ, ಇಂಧನ ಇಲಾಖೆಯಿಂದಲೂ ಈ ಕಂಪೆನಿ ಅನುಮತಿ ಪಡೆದಿಲ್ಲ. ಜತೆಗೆ ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ಹೈಕೋರ್ಟ್ ಸುತ್ತಮುತ್ತ ಇರುವ ಖಾಸಗಿ ಕಂಪೆನಿಗಳು ಸುರಕ್ಷಿತ ವಲಯ (ರೆಡ್‍ಜೋನ್) ವ್ಯಾಪ್ತಿಗೆ ಬರುತ್ತವೆ. ಇಲ್ಲಿ ಈ ರೀತಿಯ ಯಾವುದೇ ಕೆಲಸವನ್ನೂ ಮಾಡುವಂತಿಲ್ಲ. ಇಷ್ಟಾದರೂ ಸಚಿವಾಲಯದಿಂದ ಸೋಲಾರ್ ಪವರ್ ಪ್ಲಾಂಟೇಷನ್‍ಗೆ ಅನುಮತಿ ನೀಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ