ಬರ ಪರಿಸ್ಥಿತಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇದ್ದು ಸತ್ತಹಾಗೆ, ಕೆ.ಎಸ್.ಈಶ್ವರಪ್ಪ

ಬೆಳಗಾವಿ (ಸುವರ್ಣಸೌಧ), ಡಿ.12- ಬರ ಪರಿಸ್ಥಿತಿಗೆ ಸ್ಪಂದಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಇದ್ದು ಸತ್ತ ಹಾಗೆ ಎಂದು ಬಿಜೆಪಿಯ ಹಿರಿಯ ಶಾಸಕರಾದ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತ ಪಡಿಸಿದರು.

ವಿಧಾನಸಭೆಯಲ್ಲಿ ನಡೆದ ಬರ ಪರಿಸ್ಥಿತಿಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಗೆ ಮೊದಲು ರಾಜ್ಯ ಸರ್ಕಾರ ಸ್ಪಂದಿಸಬೇಕು. ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನು ಯಾವಾಗಲಾದರೂ ಕೊಟ್ಟೆ ಕೊಡುತ್ತದೆ.ರಾಜ್ಯ ಸರ್ಕಾರ ಆವರೆಗೂ ಕಾಯುತ್ತಾ ಕೂರಬಾರದು ಎಂದರು.

ರಾಜ್ಯ ಭೀಕರ ಬರ ಎದುರಿಸುತ್ತಿದ್ದರೂ ರಾಜ್ಯ ಸರ್ಕಾರ ಪರಿಹಾರ ಕೆಲಸಗಳನ್ನು ಆರಂಭಿಸಿಲ್ಲ. ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು, ವಿಡಿಯೋ ಕಾನ್ಫೆರೆನ್ಸ್ ನಡೆಸಿದರೆ ಬರ ನಿವಾರಣೆ ಸಾಧ್ಯವಾಗುವುದಿಲ್ಲ. ಸಚಿವರಿಗೆ, ಅಧಿಕಾರಿಗಳಿಗೆ ಸರ್ಕಾರ ಬಂಗಲೆ, ಕಾರು ನೀಡಿದೆ. ಈವರೆಗೂ ಯಾರು ರೈತರ ಹೊಲಗಳಿಗೆ ಹೋಗಿಲ್ಲ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ.ಎರಡು ಪಕ್ಷಗಳ ಪ್ರಮುಖ ನಾಯಕರಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಹೊಲಗಳಿಗೆ ಹೋಗಬೇಕಿತ್ತು.ಅವರನ್ನು ಅನುಸರಿಸಿ ಸಚಿವರು, ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡುತ್ತಿದ್ದರು, ಅದರಿಂದ ಬರ ಪೀಡಿತ ಪ್ರದೇಶಗಳ ಜನರಿಗೆ ಆತ್ಮವಿಶ್ವಾಸ ಬರುತ್ತಿತ್ತು.ಆದರೆ ಈ ಸರ್ಕಾರದಿಂದ ಆ ರೀತಿಯ ಪ್ರಯತ್ನಗಳಾಗಿಲ್ಲ ಎಂದು ಆರೋಪಿಸಿದರು.

ಸರ್ಕಾರ ಪ್ರತಿ ಜಿಲ್ಲೆಗೆ 50 ಲಕ್ಷ ಬಿಡುಗಡೆ ಮಾಡುವುದಾಗಿ ಹೇಳುತ್ತಿದೆ.ಆದರೆ ಬಿಜೆಪಿ ಶಾಸಕರ ನಿಯೋಗ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ನಡೆಸಿದಾಗ ಜಿಲ್ಲಾಧಿಕಾರಿಗಳನ್ನು ವಿಚಾರಿಸಲಾಗಿದೆ.ಸದ್ಯಕ್ಕೆ 25 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.ಉಳಿದ 25 ಲಕ್ಷ ರೂ.ಗಳನ್ನು ಮುಂದಿನ ಹಂತದಲ್ಲಿ ನೀಡುವುದಾಗಿ ತಿಳಿಸಲಾಗಿದೆ.ಸರ್ಕಾರ ಈಗ ಬಿಡುಗಡೆ ಮಾಡಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ತಕ್ಷಣ ಅನುದಾನ ಬಿಡುಗಡೆ ಮಾಡಿ ಎಂದು ಹೇಳಿದರು.

ಮೇವಿನ ಕೊರತೆಯಿಂದ ರೈತರು ತಮ್ಮ ಜಾನುವಾರುಗಳನ್ನು ಹಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೆ ಎಂದು ಅವರು, ಕುಡಿಯುವ ನೀರಿನ ಸಮಸ್ಯೆಯೂ ತೀವ್ರವಾಗಿದೆ.ಅದರ ಕೆಲಸಗಳಿಗೆ ಅನುದಾನದ ಮಿತಿ ಹಾಕಬೇಡಿ.ನೀರು ಜನರ ಮೂಲಭೂತ ಅಗತ್ಯ ಅದಕ್ಕೆ ಯಾವುದೇ ಕಡಿವಾಣ ಹಾಕದೆ ಉದಾರವಾಗಿ ಹಣ ನೀಡಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಕನಿಷ್ಟ 5 ಕೋಟಿ ರೂ.ಗಳನ್ನು ಖಾಯಂ ಆಗಿ ಜಾಯ್ದಿರಿಸಿಕೊಳ್ಳುವಂತೆ ಸೂಚಿಸಲಾಗಿದೆ. ಬರ ನಿರ್ವಹಣೆಗೆ ಹಣಕಾಸಿನ ಕೊರತೆ ಇಲ್ಲ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ಈಶ್ವರಪ್ಪ ಅವರಿಗೆ ಸ್ಪಷ್ಟನೆ ನೀಡಿದರು.ಸರ್ಕಾರ ಬರ ನಿರ್ವಹಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಉತ್ತರ ನೀಡುವಾಗ ಸಮಗ್ರ ವಿವರಣೆ ನೀಡುವುದಾಗಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ