ರಾಜ್ಯದ ಡ್ಯಾಮ್ ಮತ್ತು ನದಿಗಳಲ್ಲಿರುವ ಹೂಳನ್ನು ತೆಗೆಯಲು ಸರ್ಕಾರದ ಸಮೀಕ್ಷೆ ಸಚಿವ ಡಿ.ಕೆ.ಶಿವಕುಮಾರ್

ಬೆಳಗಾವಿ, ಡಿ.11- ರಾಜ್ಯದ ಎಲ್ಲ ಅಣ್ಣೆಕಟ್ಟು ಮತ್ತು ನದಿಗಳಲ್ಲಿ ಸಂಗ್ರಹವಾಗಿರುವ ಹೂಳನ್ನು ತೆಗೆಯಲು ಸರ್ಕಾರ ಸಮೀಕ್ಷೆ ನಡೆಸುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್‍ನಲ್ಲಿಂದು ತಿಳಿಸಿದರು.

ದಕ್ಷಿಣ, ಉತ್ತರ ಕರಾವಳಿ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿರುವ ಅಣೆಕಟ್ಟು ಮತ್ತು ನದಿಗಳಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯುವ ಸಂಬಂಧ ಆಧುನಿಕ ತಂತ್ರಜ್ಞಾನದ ಮೂಲಕ ಸಮೀಕ್ಷೆ ನಡೆಸುತ್ತಿದ್ದೇವೆ. ಈ ಸಮೀಕ್ಷಾ ವರದಿ ಬಂದ ನಂತರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಅಣೆಕಟ್ಟು ಮತ್ತು ನದಿಗಳಲ್ಲಿ ವ್ಯಾಪಕ ಪ್ರಮಾಣದ ಹೂಳು ಸಂಗ್ರಹವಾಗಿರುವುದರಿಂದ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಕೂಡ ಲಭ್ಯವಾಗುತ್ತಿಲ್ಲ. ಈಗಾಗಲೇ ಡ್ರೋಣ್ ಮೂಲಕ ಸಮೀಕ್ಷೆ ನಡೆಸುವ ಬಗ್ಗೆ ಚಿಂತನೆ ನಡೆದಿದೆ.

ಹೂಳು ತೆಗೆದರೆ ಎಲ್ಲ ಅಣ್ಣೆಕಟ್ಟು ಮತ್ತು ನದಿಗಳಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲಿದೆ ಎಂದರು. ಇತ್ತೀಚೆಗೆ ಕೊಡುಗು ಜಿಲ್ಲೆಗಳಲ್ಲಿ ಸಂಭವಿಸಿದ ಅತಿವೃಷ್ಟಿ ಮತ್ತು ಭೂಕುಸಿತದಿಂದಾಗಿ ನದಿಗಳಲ್ಲಿ ಭಾರೀ ಪ್ರಮಾಣದ ಹೂಳು ತುಂಬಿದೆ. ಕೆಲವು ಕಡೆ ನದಿಯ ತಿರುವಿನ ದಿಕ್ಕೇ ಬದಲಾಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕೆಂದು ಸದಸ್ಯೆ ವೀಣಾ ಅಚ್ಚಯ್ಯ ಸಚಿವರಿಗೆ ಮನವಿ ಮಾಡಿದರು.

ಈಗಾಗಲೇ ನಾನು ಕೊಡಗಿಗೆ ಭೇಟಿ ನೀಡಿದ್ದೇನೆ. ಜಿಲ್ಲಾಧಿಕಾರಿಗಳು ಸೇರಿದಂತೆ ನಮ್ಮ ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಿದ್ದೇವೆ. ಕಾಲ ಮಿತಿಯೊಳಗೆ ಇದನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ