ಬೆಂಗಳೂರು, ಡಿ.8-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮಂಡಿಸಿರುವ ಬಜೆಟ್ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಿಎಜಿ ವರದಿ ಉಲ್ಲೇಖಿಸಿರುವುದರಿಂದ ತಕ್ಷಣವೇ ರಾಜ್ಯ ಸರ್ಕಾರ ಸದನ ಸಮಿತಿ ರಚನೆ ಮಾಡಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ವಿವಿಧ ಇಲಾಖೆಗಳಿಗೆ ನಿಗದಿಯಾಗಿದ್ದ ಸುಮಾರು 37 ಸಾವಿರ ಕೋಟಿ ಹಣ ಖರ್ಚಾಗಿರುವುದಕ್ಕೆ ಲೆಕ್ಕ ಸಿಗುತ್ತಿಲ್ಲ. ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂಬುದು ಸಿಎಜಿ ವರದಿಯಿಂದ ಬಹಿರಂಗಗೊಂಡಿರುವುದರಿಂದ ಸರ್ಕಾರ ಸದನ ಸಮಿತಿ ರಚನೆ ಮಾಡುವಂತೆ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಜೆಟ್ ಗಾತ್ರ ಹೆಚ್ಚಾದಂತೆ ವ್ಯತ್ಯಾಸಗಳು ಆಗುತ್ತವೆ ಎಂದು ಸಿದ್ದರಾಮಯ್ಯನವರು ಉಡಾಫೆಯಾಗಿ ಮಾತನಾಡುತ್ತಾರೆ. ಕುಂಬಳಕಾಯಿ ಕಳ್ಳ ಎಂದರೆ ಇವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಜನರ ಹಣದಿಂದಲೇ ಬಜೆಟ್ ಮಂಡನೆಯಾಗುತ್ತದೆ. ಒಂದೊಂದು ಪೈಸೆಗೂ ಕೂಡ ಲೆಕ್ಕ ಇರಬೇಕು. 13 ಬಾರಿ ಬಜೆಟ್ ಮಂಡಿಸಿರುವ, ಸ್ವತಃ ಆರ್ಥಿಕ ತಜ್ಞರೂ ಆಗಿರುವ ಸಿದ್ದರಾಮಯ್ಯನವರು ಲಘುವಾಗಿ ಮಾತನಾಡುವುದನ್ನು ಸಿಎಜಿ ವರದಿಯಲ್ಲಿ ಅಕ್ರಮ ನಡೆದಿದ್ದರೆ ತನಿಖೆಗೆ ಏಕೆ ಹೆದರಬೇಕು ಎಂದು ಹೇಳಿದರು.
ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕಾರಣಕ್ಕಾಗಿ ಸಿಡಿಮಿಡಿಗೊಳ್ಳುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಅವರಿಗೆ ಮಾಧ್ಯಮದವರನ್ನು ಕಂಡರೆ ಆಗುವುದಿಲ್ಲ. ಸರ್ಕಾರವನ್ನು ಟೀಕಿಸಿದರೆ ಪ್ರತಿಪಕ್ಷಗಳನ್ನೂ ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಒಳ್ಳೆಯದನ್ನು ಮಾಡಿದೆ ಎಂದರೆ ಅದನ್ನು ಕೇಳಿಸಿಕೊಳ್ಳುವುದಿಲ್ಲ. ಪ್ರತಿಯೊಂದಕ್ಕೂ ಸಿಡಿಮಿಡಿಗೊಂಡರೆ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿನ್ನೆ ಸಂಸದರು ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡಿರುವ ಬಗ್ಗೆ ಅಂಕಿಅಂಶಗಳ ದಾಖಲೆ ನೀಡಿದರು. ನಾಲ್ಕು ವರ್ಷದಲ್ಲಿ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ನಲ್ಲಿ ಹೆಚ್ಚಿನ ಅನುದಾನ ರಾಜ್ಯಕ್ಕೆ ಬಿಡುಗಡೆಯಾಗಿದೆ. ಸುಮಾರು ಆರು ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ. ಕರ್ನಾಟಕ ವಿಷಯದಲ್ಲಿ ಯಾವುದೇ ರೀತಿಯ ಮಲತಾಯಿ ಧೋರಣೆಯನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸತ್ಯ ಹೇಳುವ ಶಾಸಕರು, ಸಂಸದರು ಮತ್ತು ಮಾಧ್ಯಮದವರನ್ನು ಕಂಡರೆ ಮುಖ್ಯಮಂತ್ರಿಗಳಿಗೆ ಆಗುವುದಿಲ್ಲ. ನೀವು ಯಾರ ಹಂಗಿನಲ್ಲೂ ಇಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಬಿಜೆಪಿ ಅಕ್ರಮಗಳ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ. ಅದೇ ಕಾಂಗ್ರೆಸ್ನವರ ಭ್ರಷ್ಟಾಚಾರದಲ್ಲಿ ಜಾಣ ಮೌನ, ಜಾಣ ಕಿವುಡು ಎಂದು ವ್ಯಂಗ್ಯವಾಡಿದರು.
ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ರೈತರ ಸಮಾವೇಶ ನಡೆಸಲಾಗುವುದು. ಬ್ಯಾಟ್ಸ್ಮೆನ್ ಹಿಟ್ ವಿಕೆಟ್ ಮಾಡಿಕೊಂಡರೆ ನಾವು ಹಂಪೈರ್ಗಳನ್ನು ದೂರಲು ಸಾಧ್ಯವಿಲ್ಲ. ಏಕೆಂದರೆ ಮುಖ್ಯಮಂತ್ರಿಗಳೇ ವಿವಾದ ಕೇಂದ್ರಬಿಂದುವಾಗಿದ್ದಾರೆ ಎಂದರು.
ಇನ್ನು ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಕುರಿತಂತೆ ಸಮೀಕ್ಷೆಗಳ ಬಗ್ಗೆ ನಾವು ಮಾತನಾಡುವುದಿಲ್ಲ. ಹಿಂದೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ಇವೇ ಸಮೀಕ್ಷೆಗಳು ಹೇಳಿದ್ದವು. ಆದರೆ ಯಾರೂ ಊಹಿಸದ ರೀತಿಯಲ್ಲಿ ಫಲಿತಾಂಶ ಬಂದಿತ್ತು. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.
ಫಲಿತಾಂಶ ಬಂದಾಗ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಗೆದ್ದರೆ ಜನಾದೇಶ. ಬಿಜೆಪಿ ಗೆದ್ದರೆ ಇವಿಎಂ ದೋಷ. ಇದು ಕಾಂಗ್ರೆಸ್ನ ಹಣೆಬರಹ ಎಂದು ಕುಹಕವಾಡಿದರು.