ಕಾಂಗ್ರೇಸ್-ಜೆಡಿಎಸ್‍ನಲ್ಲಿ ತೀವ್ರ ಪೈಪೋಟಿ

ಬೆಂಗಳೂರು, ಡಿ.8- ನಿಗಮ-ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಶುರುವಾಗಿದೆ.

ಪ್ರಮುಖ ನಿಗಮ-ಮಂಡಳಿಗಳ ಮೇಲೆ ಕಣ್ಣಿಟ್ಟಿರುವ ಎರಡೂ ಪಕ್ಷಗಳ ಶಾಸಕರು ಈ ಹುದ್ದೆಗಳನ್ನು ಪಡೆಯಲು ತೀವ್ರ ಲಾಬಿ ಆರಂಭಿಸಿದ್ದಾರೆ.

ಅಧಿವೇಶನದ ನಂತರ ಸುಮಾರು ಪ್ರಮುಖ 30 ನಿಗಮ-ಮಂಡಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಮನ್ವಯ ಸಮಿತಿಯಲ್ಲಿ ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಲ್ಲಿರುವ ಆಕಾಂಕ್ಷಿ ಶಾಸಕರು ಪೈಪೋಟಿ ಶುರುವಿಟ್ಟುಕೊಂಡಿದ್ದಾರೆ.

ಎಂಎಸ್‍ಐಎಲ್, ಹಟ್ಟಿ ಚಿನ್ನದ ಗಣಿ, ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ, ವಸತಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಬಿಎಂಟಿಸಿ, ಬಿಡಬ್ಲ್ಯೂಎಸ್‍ಎಸ್‍ಬಿ, ಬಿಡಿಎ, ಕೊಳಗೇರಿ ಅಭಿವೃದ್ಧಿ ನಿಗಮ, ಕೈಗಾರಿಕೆಗಳ ಅಭಿವೃದ್ಧಿ ನಿಗಮ ಸೇರಿದಂತೆ ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನವನ್ನು ನಮಗೆ ನೀಡಬೇಕೆಂದು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪಟ್ಟು ಹಿಡಿದಿದ್ದಾರೆ.

ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನ, ಪ್ರಮುಖ ಸಚಿವ ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಲಾಗಿದೆ. ನಿಗಮ-ಮಂಡಳಿಗಳಲ್ಲಾದರೂ ಕಾಂಗ್ರೆಸ್‍ಗೆ ಆದ್ಯತೆ ನೀಡಬೇಕು. ಪ್ರಮುಖ ನಿಗಮಗಳನ್ನು ಕಾಂಗ್ರೆಸ್ ಶಾಸಕರಿಗೆ ನೀಡಿ ಎಂದು ಹಲವು ಕಾಂಗ್ರೆಸ್ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರಿದ್ದಾರೆ.

30 ನಿಗಮ-ಮಂಡಳಿಗಳಲ್ಲಿ 20 ಕಾಂಗ್ರೆಸ್ ಹಾಗೂ 10 ಜೆಡಿಎಸ್ ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಜೆಡಿಎಸ್‍ನ 10 ಶಾಸಕರು ಸಚಿವರಾಗಿದ್ದಾರೆ. ಸಾರಿಗೆ, ಹಣಕಾಸು, ಇಂಧನ ಸೇರಿದಂತೆ ಪ್ರಮುಖ ಖಾತೆಗಳನ್ನು ಕೂಡ ಅವರಿಗೆ ನೀಡಲಾಗಿದೆ. ಹಾಗಾಗಿ ಪ್ರಮುಖ ನಿಗಮ-ಮಂಡಳಿಗಳನ್ನು ಕಾಂಗ್ರೆಸ್ ಶಾಸಕರಿಗೆ ನೀಡಬೇಕೆಂದು ಒತ್ತಡ ತರಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದು, ಯಾರಿಗೆ ಯಾವ ನಿಗಮ ನೀಡಬೇಕೆಂದು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಅಧಿವೇಶನದ ನಂತರ ನಿಗಮ-ಮಂಡಳಿಗಳ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ ಕಡಿಮೆ ಇರುವುದರಿಂದ ನಿಗಮ-ಮಂಡಳಿಗಳ ನೇಮಕಕ್ಕೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಅಧಿವೇಶನದ ನಂತರ ಈ ಪ್ರಕ್ರಿಯೆ ನಡೆಯುವುದು ಬಹುತೇಕ ಖಚಿತವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ