32 ದಿನಗಳಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಉದ್ಯಾನವನ ನಿರ್ಮಾಣ

ಬೆಂಗಳೂರು, ಡಿ.8- ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಇಂದಿಲ್ಲಿ ಅಭಿಪ್ರಾಯಪಟ್ಟರು.

ಅಗ್ರಹಾರ ದಾಸರಹಳ್ಳಿ ವಾರ್ಡ್‍ನಲ್ಲಿ ನೇತಾಜಿ ಸುಭಾಷ್‍ಚಂದ್ರಬೋಸ್ ಉದ್ಯಾನವನ ಹಾಗೂ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.

ಕೇವಲ 32 ದಿನಗಳಲ್ಲಿ ದಿ.ಅನಂತ್‍ಕುಮಾರ್ ಅವರ ಸ್ಮರಣಾರ್ಥ ನೇತಾಜಿ ಸುಭಾಷ್‍ಚಂದ್ರಬೋಸ್ ಪಾರ್ಕ್ ನಿರ್ಮಾಣ ಮಾಡಲಾಗಿದೆ ಎಂದು ಅವರು ಹೇಳಿದರು.

ನಗರದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನವೊಲಿಸುವಲ್ಲಿ ಅನಂತ್‍ಕುಮಾರ್ ಅವರು ಯಶಸ್ವಿಯಾಗಿದ್ದರು. ಅವರ ಪರಿಶ್ರಮದ ಫಲವಾಗಿ ಇಂದು ಸುಮಾರು 5 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಸಂಚಾರ ಮಾಡುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಗೋವಿಂದರಾಜನಗರದಲ್ಲಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಐಎಎಸ್ ಸೆಂಟರ್ ತೆರೆಯಲಾಗುವುದು. 1.75 ಕೋಟಿ ರೂ. ವೆಚ್ಚದಲ್ಲಿ ಇ-ಲೈಬ್ರರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಸಹಭಾಗಿತ್ವದಲ್ಲಿ 200 ಹಾಸಿಗೆಯ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸೋಮಣ್ಣ ಹೇಳಿದರು.

ಮೇಯರ್ ಗಂಗಾಂಬಿಕೆ ಮಾತನಾಡಿ, ಕಾಂಕ್ರಿಟ್ ನಾಡಾಗಿರುವ ಬೆಂಗಳೂರನ್ನು ಹಸಿರುಮಯಗೊಳಿಸಲು ಪ್ರತಿಯೊಬ್ಬ ನಾಗರಿಕರೂ ಸಸಿ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದರು.

ಒಬ್ಬ ವ್ಯಕ್ತಿಗೆ ಉತ್ತಮ ಆಮ್ಲಜನಕ ದೊರೆಯಬೇಕಾದರೆ ಏಳು ಮರಗಳ ಅವಶ್ಯಕತೆಯಿದೆ. ಆದರೆ, ಇಂದು ನಗರ ಕಾಂಕ್ರಿಟ್ ನಾಡಾಗಿದ್ದು, ಮನುಷ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಮತ್ತೆ ನಗರವನ್ನು ಉದ್ಯಾನನಗರಿಯನ್ನಾಗಿಸುವ ಅವಶ್ಯಕತೆಯಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.

ಉಪಮೇಯರ್ ಭದ್ರೇಗೌಡ , ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಅ.ದೇವೇಗೌಡ, ಬಿಬಿಎಂಪಿ ಸದಸ್ಯರಾದ ಉಮೇಶ್‍ಶೆಟ್ಟಿ, ಮೋಹನ್‍ಕುಮಾರ್, ಶಾಂತಕುಮಾರಿ, ಶಿಲ್ಪಾ ಶ್ರೀಧರ್, ಬಿಜೆಪಿ ಮುಖಂಡ ಶ್ರೀಧರ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ