ನವದೆಹಲಿ: ಅಕ್ರಮ ವಲಸಿಗರು ಇಲ್ಲಿ ನೆಲೆಯೂರಲು ಭಾರತವೇನೂ ಧರ್ಮಶಾಲೆಯಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಎನ್ ಆರ್ ಸಿ ದೇಶದ ಮೇಲಿನ ಅಕ್ರಮ ವಲಸಿಗರ ಅಪಾಯವನ್ನು ಪರಿಹರಿಸುತ್ತದೆ. ಅಕ್ರಮ ವಲಸೆ ದೇಶಕ್ಕೆ ಅಪಾಯಕಾರಿಯಾದದ್ದು, ಭಾರತೀಯರಿಗೆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ, ಅಕ್ರಮ ವಲಸಿಗರು ಬಂದು ಇಲ್ಲಿ ನೆಲೆಯೂರಲು ಭಾರತ ಧರ್ಮಶಾಲೆಯಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.
ಅಕ್ರಮ ವಲಸೆ ದೇಶಕ್ಕೆ ಅಪಾಯಕಾರಿ. ಎನ್ ಆರ್ ಸಿ ದೇಶದ ಅಕ್ರಮ ವಲಸೆಯ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವಾಗಿದೆ. ಎನ್ ಆರ್ ಸಿಯೊಂದಿಗೆ ಬಿಜೆಪಿಗೆ ಸಂಬಂಧ ಕಲ್ಪಿಸಬಾರದು ಎಂದು ತಿಳಿಸಿದರು.
ಒಂದು ದೇಶದಲ್ಲಿ ಯಾರುಬೇಕಾದರೂ ಬಂದು ನೆಲೆಯೂರಲು ಸಾಧ್ಯವಿಲ್ಲ. ಆ ದೇಶದ ಪ್ರಜೆಗಳಿಗೆ ಆ ದೇಶದ ಸಂಪನ್ಮೂಲಗಳ ಮೇಲೆ ಹಕ್ಕಿದೆ. ಹೊರಗಿನಿಂದಬಂದವರು, ಅಕ್ರಮ ವಲಸಿಗರು ಬಂದು ಒಂದು ದೇಶದಲ್ಲಿ ನೆಲೆಯೂರಲು ಹೇಗೆ ಸಾಧ್ಯ? ಯಾವ ದೇಶವೂ ಇದನ್ನು ಒಪ್ಪುವುದಿಲ್ಲ. ಯಾರು ಬೇಕಾದರೂ ಬಂದು ನೆಲೆಯೂರುವುದಕ್ಕೆ ಭಾರತವೇನು ಧರ್ಮಛತ್ರ ಅಲ್ಲ ಎಂದು ಹೇಳಿದರು.
ಇದೇ ವೇಳೆ ಅಕ್ರಮ ವಲಸಿಗರನ್ನು ಓಟ್ ಬ್ಯಾಂಕ್ ನ್ನಾಗಿ ಮಾಡಿಕೊಂಡಿರುವ ಪಕ್ಷಗಳ ವಿರುದ್ಧವೂ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, 70 ವರ್ಷಗಳಿಂದ ಅಕ್ರಮ ವಲಸಿಗರನ್ನು ಓಟ್ ಬ್ಯಾಂಕ್ ನ್ನಾಗಿ ಮಾಡಿಕೊಳ್ಳಲಾಗಿದೆ. ಆದರೆ ಬಿಜೆಪಿ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
India is not a ‘dharamshala’ for illegal immigrants: Amit Shah on NRC