ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಮೇಲೆ ನಿಂತಿರುವ ಆಪರೇಷನ್ ಕಮಲ ಮತ್ತು ಸರ್ಕಾರದ ಅಳಿವು-ಉಳಿವು

ಬೆಂಗಳೂರು,ಡಿ.7- ಇಡೀ ದೇಶವೇ ಚಾತಕಪಕ್ಷಿಯಂತೆ ಎದುರು ನೋಡುತ್ತಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕವೇ ಆಪರೇಷನ್ ಕಮಲ ಮತ್ತು ಕರ್ನಾಟಕ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಒಂದು ವೇಳೆ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ಬಿಜೆಪಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡದಲ್ಲಿ ಅಧಿಕಾರ ಉಳಿಸಿಕೊಂಡರೆ ನಿಸ್ಸಂದೇಹವಾಗಿ ದೋಸ್ತಿ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈಶಾನ್ಯ ರಾಜ್ಯ ಮಿಜೋರಾಂ ಮತ್ತು ದಕ್ಷಿಣ ರಾಜ್ಯ ತೆಲಂಗಾಣದಲ್ಲಿ ಬಿಜೆಪಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿಲ್ಲವಾದರೂ ಸರ್ಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗುವ ಕನಸು ಕಾಣುತ್ತಿದೆ.

ಇದಕ್ಕೆ ವ್ಯತಿರಿಕ್ತವಾಗಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಘಡ, ಮಿಜೋರಾಂ ಮತ್ತು ತೆಲಾಂಗಣದಲ್ಲಿ ಅಪ್ಪಿತಪ್ಪಿ ಕಾಂಗ್ರೆಸ್ ಪವಾಡಸದೃಶ ರೀತಿಯಲ್ಲಿ ಅಧಿಕಾರಕ್ಕೆ ಬಂದರೆ ಕರ್ನಾಟಕದ ದೋಸ್ತಿ ಸರ್ಕಾರಕ್ಕೆ ಎದುರಾಗಿರುವ ಎಲ್ಲಾ ವಿಘ್ನಗಳು ತನ್ನಿಂದ ತಾನೇ ನಿವಾರಣೆಯಾಗುತ್ತದೆ.

ಲೋಕಸಭೆ ಚುನಾವಣೆವರೆಗೂ ಕೇಂದ್ರ ಬಿಜೆಪಿ ವರಿಷ್ಠರು ಇಲ್ಲಿನ ಸರ್ಕಾರವನ್ನು ಅಸ್ಥಿರಗೊಳಿಸುವಂತಹ ದುಸ್ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ಇಲ್ಲ. ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯು ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದೇ ಹೇಳಲಾಗುತ್ತಿದೆ.ಈ ಐದು ರಾಜ್ಯಗಳ ಚುನಾವಣೆಯಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸುತ್ತದೆಯೋ ಸಹಜವಾಗಿ 2019ರ ಲೋಕಸಭೆ ಚುನಾವಣೆಯಲ್ಲೂ ಅದೇ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

2013ರಲ್ಲಿ ನಡೆದ ಮಧ್ಯಪ್ರದೇಶ, ಛತ್ತೀಸ್‍ಘಡ, ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರ ಹಿಡಿದು ಸತತ ಮೂರು ಬಾರಿ ದೆಹಲಿಯಲ್ಲಿ ಅಧಿಕಾರ ಹಿಡಿದಿದ್ದ ಕಾಂಗ್ರೆಸ್ ಪಕ್ಷವನ್ನು ಧೂಳೀಪಟ ಮಾಡಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಈ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತದಾನ ನಾಡಿಮಿಡಿತ ಅರಿಯಲು ಸಹಾಯವಾಗುತ್ತದೆ. ಹೀಗಾಗಿ ಈ ಚುನಾವಣೆಯನ್ನು ಸೆಮಿಫೈನಲ್ ಎಂದೇ ಪರಿಗಣಿಸಲಾಗಿದೆ.

ದೋಸ್ತಿಗೆ ಸಂಕಷ್ಟ:
ಕಡೆ ಪಕ್ಷ ಬಿಜೆಪಿ ಎರಡು ರಾಜ್ಯಗಳಲ್ಲಿ ಗೆದ್ದರೂ ಇಲ್ಲಿನ ಸರ್ಕಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ. ರಾಜಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಅನೇಕರು ಅಬ್ಬರದ ಪ್ರಚಾರ ನಡೆಸಿದ್ದಾರೆ.

ಮೂರು ರಾಜ್ಯಗಳಲ್ಲಿ ಸ್ಪಷ್ಟ ಬಹುಮತ ಬಂದರೆ ಸಹಜವಾಗಿ ದೇಶದ ಜನತೆ ಬಿಜೆಪಿ ಪರವಾಗಿ ಇದ್ದಾರೆ ಎಂಬುದು ಸಾಬೀತಾಗುತ್ತದೆ. ಅಲ್ಲದೆ 2019ರ ಲೋಕಸಭೆ ಚುನಾವಣೆಯಲ್ಲಿ ಪುನಃ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ತನ್ನದೇ ಆದ ರಣತಂತ್ರ ರೂಪಿಸುತ್ತದೆ.
ಮಂಗಳವಾರದ ಫಲಿತಾಂಶದ ನಂತರ ಕೆಲವು ಮಹತ್ವದ ರಾಜಕೀಯ ಪಲ್ಲಟಗಳು ನಡೆಯುವ ಸಾಧ್ಯತೆ ಇದೆ ಎಂದು ದೋಸ್ತಿ ಪಕ್ಷಗಳ ಶಾಸಕರೇ ಹೇಳುತ್ತಿದ್ದಾರೆ.

ಒಂದು ವೇಳೆ ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಫಿನಿಕ್ಸ್‍ನಂತೆ ಮೇಲೆದ್ದರೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಇನ್ನಷ್ಟು ಸುಭದ್ರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ದೇಶದಲ್ಲಿ ಬಿಜೆಪಿ ವಿರೋಧಿ ಅಲೆ ಹೆಚ್ಚಾಗುತ್ತದೆ ಎಂಬ ಭಾವನೆ ಶಾಸಕರಲ್ಲಿ ಬರುವುದರಿಂದ ಯಾರೊಬ್ಬರೂ ಪಕ್ಷ ಬಿಡುವಂತಹ ದುಸ್ಸಾಹಕ್ಕೆ ಕೈ ಹಾಕುವುದಿಲ್ಲ.
ಹೀಗಾಗಿಯೇ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮಂಗಳವಾರ ಪ್ರಕಟಗೊಳ್ಳಲಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ತುದಿಗಾಲಿನಲ್ಲಿ ಎದುರು ನೋಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ