ಮೈಸೂರು,ಡಿ.7-ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಿದ್ದ ರಿಯಲ್ ಎಸ್ಟೇಟ್ನ ಮೂವರು ಬ್ರೋಕರ್ಗಳನ್ನು ವಿಜಯನಗರ ಠಾಣೆ ಪೆÇಲೀಸರು ಬಂಧಿಸಿ 23.50 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಅರವಿಂದನಗರ ನಿವಾಸಿ ಸೋಮೇಶ(35), ಸಾತಗಳ್ಳಿ ನಿವಾಸಿಗಳಾದ ಮಕ್ಬಲ್ (47) ಮತ್ತು ಜಯರಾಮ್(48) ಬಂಧಿತ ಆರೋಪಿಗಳಾಗಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾರೆ.
ಹಿನಕಲ್ನ ಮಹಿಳೆಯೊಬ್ಬರಿಗೆ ರಿಯಲ್ ಎಸ್ಟೇಟ್ ಬ್ರೋಕರ್ಗಳು ವಿಜಯನಗರದ 4ನೇ ಹಂತ, 3ನೇ ಫೇಸ್ನಲ್ಲಿರುವ ನಿವೇಶನವೊಂದಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಲ್ಲದೆ ಈ ನಿವೇಶನದ ಮಾಲೀಕರೆಂದು ಸುರೇಶ್ ಚಂದ್ರಬಾಬು ಎಂಬುವರ ಹೆಸರಿನಲ್ಲಿ ಜಯರಾಮ್ ಎಂಬ ನಕಲಿ ವ್ಯಕ್ತಿಯನ್ನು ಸಹ ಸೃಷ್ಟಿಸಿ 72 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದರು.
ನಿವೇಶನ ಪಡೆದುಕೊಂಡಿದ್ದ ಮಹಿಳೆ ಖಾತೆ ಮಾಡಿಸಲು ಹೋದಾಗ ಮೋಸ ಹೋಗಿರುವ ಬಗ್ಗೆ ತಿಳಿದು ವಿಜಯನಗರ ಪೊಲೀಸರಿಗೆ ದೂರು ನೀಡಿದ್ದರು.
ಬಂಧಿತರಿಂದ 23.50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಪತ್ತೆಗೆ ತನಿಖೆ ತೀವ್ರಗೊಳಿಸಿದ್ದಾರೆ.
ಈ ಆರೋಪಿಗಳು ಮೂಡಾ ವ್ಯಾಪ್ತಿಯಲ್ಲಿ ಮಂಜೂರಾಗಿರುವ ನಿವೇಶನಗಳ ಪೈಕಿ ದೂರದ ಊರುಗಳಲ್ಲಿರುವ ನಿವೇಶನದ ಮಾಲೀಕರ ವಿವರಗಳನ್ನು ಪಡೆದು ಸದರಿ ನಿವೇಶನಗಳ ನಕಲಿ ಮಾಲೀಕರನ್ನು ಹಾಗೂ ದಾಖಲೆಗಳನ್ನು ಸೃಷ್ಟಿಸಿ ಅಮಾಯಕ ಸಾರ್ವಜನಿಕರಿಗೆ ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ನಕಲಿ ಮಾಲೀಕರಿಂದ ಸಬ್ರಿಜಿಸ್ಟ್ರಾರ್ ಕಚೇರಿಯಲ್ಲಿ ಖಾತೆ ಮಾಡಿಸುತ್ತಿದ್ದುದಾಗಿ ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.
ನರಸಿಂಹರಾಜ ಠಾಣೆ ವಿಭಾಗದ ಎಸಿಪಿ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಕುಮಾರ್, ಸಬ್ಇನ್ಸ್ಪೆಕ್ಟರ್ ರಾಮಚಂದ್ರ, ಎಎಸ್ಐ ವೆಂಕಟೇಶ್ಗೌಡ, ಸಿಬ್ಬಂದಿಗಳಾದ ಮಹದೇವ, ಸೋಮಾರಾಧ್ಯ, ಈಶ್ವರ್, ಶ್ರೀನಿವಾಸಮೂರ್ತಿ, ಕಾಂತರಾಜು, ಮಹೇಶ್ ಮಹದೇವ ಅವರನ್ನೊಳಗೊಂಡ ತಂಡ ಈ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ದಾಖಲಾತಿ ಪರಿಶೀಲಿಸಿ ನಿವೇಶನ ಕೊಳ್ಳಿ: ಸಾರ್ವಜನಿಕರು ನಿವೇಶನ ಕೊಳ್ಳುವ ಸಮಯದಲ್ಲಿ ನಿವೇಶನದ ಮಾಲೀಕರನ್ನು ಖುದ್ದಾಗಿ ಭೇಟಿ ಮಾಡಿ ದಾಖಲಾತಿಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳಲ್ಲಿ ಖುದ್ದು ಪರಿಶೀಲಿಸಿ ನಿವೇಶನ ಖರೀದಿಸುವಂತೆ ನಗರ ಪೊಲೀಸ್ ಆಯುಕ್ತರಾದ ಡಾ.ಸುಬ್ರಹ್ಮಣೇಶ್ವರ ರಾವ್ ತಿಳಿಸಿದ್ದಾರೆ.