ಸಿದ್ಧಗಂಗಾ ಶ್ರೀಗಳು ಆರೋಗ್ಯವಾಗಿದ್ದಾರೆ, ಭಕ್ತರು ಆತಂಕಪಡುವ ಅಗತ್ಯವಿಲ್ಲ: ಡಾ ಜಿ ಪರಮೇಶ್ವರ್

ತುಮಕೂರು: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಗುರುವಾರ ಬೆಳಗ್ಗೆ ಎಂದಿನಂತೆ ಮಠದ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದು ಭಕ್ತಾಧಿಗಳು ಯಾವುದೇ ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ತಿಳಿಸಿದ್ದಾರೆ.

ಸಿದ್ದಗಂಗಾ ಶ್ರೀಗಳು ನಿನ್ನೆ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡುಬಂದು ವೈದ್ಯರು ಪರೀಕ್ಷೆ ನಡೆಸಿದ್ದರು. ಶ್ರೀಗಳಿಗೆ ಏನಾಯಿತು ಎಂದು ಭಕ್ತಾಧಿಗಳು ಆತಂಕಗೊಂಡಿದ್ದರು. ಆದರೆ ಇಂದು ಬೆಳಗ್ಗೆ ಎಂದಿನಂತೆ ಲವಲವಿಕೆಯಿಂದ ಇದ್ದಾರೆ. ನಾನು ಹೋಗಿ ಭೇಟಿ ಮಾಡಿದಾಗ ಎಂದಿನಂತೆ ಎಷ್ಟು ಹೊತ್ತಿಗೆ ಬಂದಿರಿ, ಬನ್ನಿ ಕುಳಿತುಕೊಳ್ಳಿ ಎಂದು ಆತ್ಮೀಯವಾಗಿ ಮಾತನಾಡಿಸಿದರು. ಅವರ ಶಿಷ್ಯನಲ್ಲಿ ತಮಗೆ ಎಷ್ಟಾಯಿತು ಎಂದು ಕೇಳಿದರು. ಅದಕ್ಕೆ 111 ಎಂದಾಗ ಬಹಳ ಆಯಿತು ಎಂದು ಹೇಳಿ ನಕ್ಕರು. ನಂತರ ಪ್ರಸಾದ ಸ್ವೀಕರಿಸಿ ಹೋಗಿ ಎಂದು ಶ್ರೀಗಳು ಹೇಳಿದರು ಎಂದು ಪರಮೇಶ್ವರ್ ಸುದ್ದಿಗಾರರಿಗೆ ತಿಳಿಸಿದರು.

ಶ್ರೀಗಳಿಗೆ ಇಂದು ಮತ್ತು ನಾಳೆ ವಿಶ್ರಾಂತಿಯ ಅಗತ್ಯವಿರುವುದರಿಂದ ಭಕ್ತಾದಿಗಳಿಗೆ ಸಾರ್ವಜನಿಕ ದರ್ಶನವಿರುವುದಿಲ್ಲ. ಚಿಕಿತ್ಸೆ ಅಗತ್ಯವಿದ್ದರೆ ಬೆಂಗಳೂರಿಗೆ ಅಥವಾ ಚೆನ್ನೈಗೆ ಕರೆದುಕೊಂಡು ಹೋಗುವ ಕುರಿತು ವೈದ್ಯರು ನಿರ್ಧರಿಸಲಿದ್ದಾರೆ ಎಂದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ