ದಯವಿಟ್ಟು ಹಣ ಸ್ವೀಕರಿಸಿ; ನಾನು ಹಣ ಕದ್ದಿದ್ದೇನೆ ಎಂದು ಹೇಳುವುದನ್ನು ನಿಲ್ಲಿಸಿ: ಮಲ್ಯ ಪುನರುಚ್ಛಾರ

ನವದೆಹಲಿ: ಹಲವಾರು ಬ್ಯಾಂಕುಗಳಿಂದ ಸಾಲ ಪಡೆದು ಹಿಂತಿರುಗಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಉದ್ಯಮಿ ವಿಜಯ್ ಮಲ್ಯ, ಬ್ಯಾಂಕುಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.

ನಿನ್ನೆ ಟ್ವಿಟರ್ ನಲ್ಲಿ ಹೇಳಿಕೆ ನೀಡಿದ್ದ ಮಲ್ಯ, ಬ್ಯಾಂಕ್ ಗಳಿಗೆ ತಮ್ಮ ಬಳಿಯಿಂದ ಹಣವನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಈಗ ಮತ್ತೆ ಟ್ವೀಟ್ ಮಾಡಿರುವ ಮಲ್ಯ, ಭಾರತಕ್ಕೆ ನನ್ನನ್ನು ಹಸ್ತಾಂತರಿಸುವುದು ಮತ್ತು ಸಾಲ ಮರು ಪಾವತಿ ಎರಡು ಪ್ರತ್ಯೇಕ ಸಂಗತಿಗಳಾಗಿವೆ. ಅದು ಕಾನೂನು ರೀತಿಯಲ್ಲಿಯೇ ನಡೆಯಲಿ. ಸಾರ್ವಜನಿಕರ ದುಡ್ಡು ಪ್ರಮುಖ ಸಂಗತಿ. ನಾನು ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಸಿದ್ದನಿದ್ದೇನೆ. ಬ್ಯಾಂಕು ಮತ್ತು ಸರ್ಕಾರ ಅದನ್ನು ದಯಮಾಡಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ತಮ್ಮ ಸಾಲ ಮರುಪಾವತಿ ಮತ್ತು ಭಾರತಕ್ಕೆ ಗಡೀಪಾರು ಮಾಡುವುದನ್ನು ತಡೆಹಿಡಿಯಬೇಕೆಂದು ಇಂಗ್ಲೆಂಡಿನ ಕೋರ್ಟ್ ಗೆ ಮಾಡಿರುವ ಮನವಿಗೆ ಯಾವುದೇ ಸಂಬಂಧವಿಲ್ಲ ಎಂದು ಕೂಡ ಹೇಳಿದ್ದಾರೆ.

ನನ್ನ ಬಗ್ಗೆ ಮಾತನಾಡುವವರಿಗೆ ನಾನು ಒಂದನ್ನು ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ನನ್ನನ್ನು ಗಡೀಪಾರು ಮಾಡುವ ತೀರ್ಮಾನ ಅಥವಾ ಇತ್ತೀಚೆಗೆ ದುಬೈಯಿಂದ ಗಡೀಪಾರು ಮಾಡಿರುವುದು ಮತ್ತು ಸಾಲವನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿರುವುದನ್ನು ಯಾವ ರೀತಿ ಒಂದಕ್ಕೊಂದು ಸಂಬಂಧ ಕಲ್ಪಿಸುತ್ತಾರೆ ಎಂದು ನನಗೆ ಅರ್ಥವಾಗುವುದಿಲ್ಲ. ನಾನು ಎಲ್ಲೇ ಇರಲಿ, ನನ್ನ ಮನವಿ ಒಂದೇ, ದಯವಿಟ್ಟು ಹಣ ಸ್ವೀಕರಿಸಿ ಎಂದು. ನಾನು ಹಣ ಕದ್ದಿದ್ದೇನೆ ಎಂದು ಹೇಳುವುದನ್ನು ನಿಲ್ಲಿಸಬೇಕೆಂಬುದಷ್ಟೇ ನನ್ನ ಉದ್ದೇಶ ಎಂದು ತಿಳಿಸಿದ್ದಾರೆ.

‘Please take it, end narrative I stole money’: Vijay Mallya tweets again

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ