ಸರೋಜಿನಿ ಮಹಿಷಿ ವರದಿ ಅನುಷ್ಟಾನಕ್ಕೆ ಒತ್ತಾಯಿಸಿ ಡಿ. 8ರಂದು ಪ್ರತಿಭಟನೆ

ಬೆಂಗಳೂರು, ಡಿ.5-ಕೇಂದ್ರ ಸರ್ಕಾರದ ಎಲ್ಲಾ ನೇಮಕಾತಿಯಲ್ಲಿ ಸ್ಥಳೀಯರಿಗೆ ಭಾಷಾ ನ್ಯಾಯ ಮತ್ತು ಪರಿಷ್ಕøತ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಡಿ.8 ರಂದು ಪುರಭವನದ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ತೀರ್ಮಾನಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಚಂದ್ರಶೇಖರ ಪಾಟೀಲ್ ಅವರು, ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಖಚಿತಪಡಿಸುವ ಉದ್ದೇಶದಿಂದ ಪರಿಷ್ಕøತ ಸರೋಜಿನಿ ಮಹಿಷಿ ವರದಿಯನ್ನು ಕನ್ನಡ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿದೆ.ಈ ವರದಿಯನ್ನು ಸರ್ಕಾರ ಶೀಘ್ರ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು.

ಪರಿಷ್ಕøತ ವರದಿಯಲ್ಲಿ ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಉದ್ಯಮಿಗಳು ವಾಣಿಜ್ಯ ಸಂಸ್ಥೆಗಳು, ಐಟಿ-ಬಿಟಿ ಕ್ಷೇತ್ರಗಳನ್ನೊಳಗೊಂಡ ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ಸ್ಥಳೀಯರಿಗೆ ಶೇ.100ರಷ್ಟು ಮೀಸಲಾತಿ ಎಂದು ಶಿಫಾರಸು ಮಾಡಲಾಗಿದ್ದು, ಉನ್ನತ ಹುದ್ದೆಗಳಲ್ಲಿ ಶೇ.80ರಷ್ಟು ಹುದ್ದೆಗಳಿಗೆ ಸ್ಥಳೀಯರನ್ನೇ ಭರ್ತಿ ಮಾಡಬೇಕೆಂದು ವರದಿಯಲ್ಲಿ ಸ್ಪಷ್ಟಪಡಿಸಿದೆ. ಈ ವರದಿಯನ್ನು ಬೆಳಗಾವಿ ಅಧಿವೇಶನದಲ್ಲಿ ಮಸೂದೆಯ ರೂಪದಲ್ಲಿ ಮಂಡನೆಯಾಗಿ ಅಂಗೀಕಾರವಾಗಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ನಮ್ಮ ಒಕ್ಕೂಟ ಆಗ್ರಹಿಸುತ್ತದೆ ಎಂದರು.

ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲೀಷ್‍ನಲ್ಲಿ ನಡೆಸಲಾಗುತ್ತಿದ್ದು, ಬ್ಯಾಂಕಿಂಗ್ ಮತ್ತು ರೈಲ್ವೆ ಇಲಾಖೆಯಲ್ಲಿ ಸ್ಥಳೀಯರಿಗೆ ಹೆಚ್ಚು ಅನ್ಯಾಯವಾಗುತ್ತಿದೆ.ಆಂಗ್ಲ ಭಾಷೆ ಕಲಿತ ವಿದ್ಯಾರ್ಥಿಗಳು ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಹಿಂದೆ ಹೆಚ್ಚಾಗಿ ಬಳಸುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತಾರೆ ಎಂದರು.

ಎ ಮತ್ತು ಬಿ ಹುದ್ದೆಗಳನ್ನು ಅಖಿಲ ಭಾರತ ಮಟ್ಟದಲ್ಲಿ ನೇಮಕಾತಿ ಕೈಗೊಂಡಿರೂ ಪರೀಕ್ಷಾ ಮಾಧ್ಯಮ ಸಂವಿಧಾನ 8ನೇ ಪರಿಚ್ಛೇದದ ಭಾಷೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಬೇಕು, ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾದೇಶಿಕ ನ್ಯಾಯವನ್ನು ಖಚಿತಪಡಿಸಬೇಕು. ಇದು ಸಾಧ್ಯವಾಗದೆ ಇದ್ದರೆ ಪ್ರತಿಯೊಂದು ರಾಜ್ಯಕ್ಕೂ ಇಂತಿಷ್ಟು ಹುದ್ದೆಗಳನ್ನು ನಿಗದಿಗೊಳಿಸಿ ಆಯಾ ರಾಜ್ಯದ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ