ನವದೆಹಲಿ: ವಿವಿಐಪಿ ಚಾಪರ್ ಹಗರಣದಲ್ಲಿ ಕಿಕ್ ಬ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದುಬೈ ಮೂಲದ ಕ್ರಿಶ್ಚಿಯನ್ ಜೇಮ್ಸ್ ಮೈಕೆಲ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ನಿನ್ನೆ ಯುಎಇ ಒಪ್ಪಿಗೆ ನೀಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ಬರೋಬ್ಬರಿ 9 ಸಾವಿರ ಕೋಟಿ ಸಾಲ ಪಡೆದು ಲಂಡನ್ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯಗೆ ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ಬಂಧನದ ಬಗ್ಗೆ ಮತ್ತೆ ಚಿಂತೆ ಶುರುವಾದಂತಿದೆ.
ಬ್ಯಾಂಕ್ಗಳಿಂದ ಪಡೆದ ಸಾಲ ಮರುಪಾವತಿಸಲು ಸಿದ್ಧನಿದ್ದು, ಬ್ಯಾಂಕುಗಳು ಅದನ್ನು ದಯವಿಟ್ಟು ಸ್ವೀಕರಿಸಬೇಕು ಎಂದು ಟ್ವಿಟ್ಟರ್ ಮೂಲಕ ವಿಜಯ್ ಮಲ್ಯ ಇಂದು ಮನವಿ ಮಾಡಿಕೊಂಡಿದ್ದಾರೆ. ಮಾಧ್ಯಮಗಳು ತನ್ನನ್ನು ಮೋಸಗಾರ, ದೇಶಬಿಟ್ಟು ಓಡಿಹೋಗಿ ತಲೆಮರೆಸಿಕೊಂಡಿದ್ದಾನೆ ಎಂದೆಲ್ಲ ತಪ್ಪಾಗಿ ಬಿಂಬಿಸುತ್ತಿವೆ. ನಾನು ಸಾಲ ಮಾಡಿದ ಹಣವನ್ನು ವಾಪಾಸ್ ನೀಡುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ನಾನು ಕೊಟ್ಟ ಆಫರ್ ಅನ್ನು ಬ್ಯಾಂಕ್ಗಳು ಒಪ್ಪಿಕೊಂಡರೆ ಅದರಿಂದ ಖಂಡಿತ ನಷ್ಟವಾಗುವುದಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಚಾಪರ್ ಹಗರಣದ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮೈಕೆಲ್ ಅವರನ್ನು ದುಬೈನಿಂದ ಭಾರತಕ್ಕೆ ಹಸ್ತಾಂತರ ಮಾಡುವಂತೆ ನಿನ್ನೆ ರಾತ್ರಿ ಆದೇಶ ನೀಡಲಾಗಿತ್ತು. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾತನಾಡಿ, ಕ್ರಿಶ್ಚಿಯನ್ ಮೈಕೆಲ್ ರೀತಿಯಲ್ಲೇ ನಮ್ಮ ದೇಶದಿಂದ ತಲೆಮರೆಸಿಕೊಂಡಿರುವ ವಿಜಯ್ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರನ್ನೂ ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ವಿಜಯ್ ಮಲ್ಯ ಸರಣಿ ಟ್ವೀಟ್ಗಳನ್ನು ಮಾಡಿದ್ದು, ತನ್ನ ಆಫರ್ ಒಪ್ಪಿಕೊಂಡು ಎಲ್ಲ ಆರೋಪಗಳಿಂದ ಮುಕ್ತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ನನ್ನನ್ನು ಕೂಡ ಗಡಿಪಾರು ಮಾಡಲಾಗುತ್ತದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡುತ್ತಿವೆ. ಆ ಬಗ್ಗೆ ಈಗ ನಾನೇನೂ ಹೇಳುವುದಿಲ್ಲ. ಕಾನೂನುಬದ್ಧವಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ. ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದೆಲ್ಲ ಸುಳ್ಳು. ನಾನು ಪಡೆದ ಹಣವನ್ನು ಸಂಪೂರ್ಣವಾಗಿ ಹಿಂತಿರುಗಿಸಲು ನಾನು ಸಿದ್ಧನಿದ್ದೇನೆ. ಸರ್ಕಾರ ಮತ್ತು ಬ್ಯಾಂಕ್ಗಳು ಆ ಹಣವನ್ನು ಸ್ವೀಕರಿಸಬೇಕು. ನಾನು ಹಣವನ್ನು ಹಿಂತಿರುಗಿಸುತ್ತೇನೆ ಎಂದರೂ ಬೇಡ ಎನ್ನುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.