ಸರ್ಕಾರ ಬಂಡೆಯಂತೆ ಭದ್ರವಾಗಿದೆ ಸಿ.ಎಂ.ಕುಮಾರಸ್ವಾಮಿ

ಬೆಂಗಳೂರು, ಡಿ.5-ಸರ್ಕಾರ ಬಂಡೆ ತರಹ ಭದ್ರವಾಗಿದೆ.ಯಾರು ಎಷ್ಟೇ ಸದ್ದು ಮಾಡಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ವಿಧಾನಸೌಧದ ಮುಂಭಾಗ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಳೆದ ಆರು ತಿಂಗಳಿನಿಂದಲೂ ಭೂಕಂಪವಾಗುತ್ತದೆ.ಸರ್ಕಾರ ಪತನವಾಗುತ್ತದೆ ಎಂಬ ರೀತಿ ಸೌಂಡ್ ಮಾಡುತ್ತಲೇ ಇದ್ದಾರೆ. ಅದರಿಂದ ಏನು ಪ್ರಯೋಜನವಾಯಿತು..? ಸರ್ಕಾರ ಕಲ್ಲುಬಂಡೆಯಂತೆ ಭದ್ರವಾಗಿದ್ದು, ಯಾವುದಕ್ಕೂ ಅಲುಗಾಡುವುದಿಲ್ಲ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಮಾತುಗಳಿಗೆ ನಾವು ಮಹತ್ವ ಕೊಡಬೇಕಾಗಿಲ್ಲ. ಜನಪರವಾಗಿ ಕೆಲಸಗಳನ್ನು ಮೈತ್ರಿ ಸರ್ಕಾರ ನಡೆಸುತ್ತಿದ್ದು, ಜನರ ವಿಶ್ವಾಸ ಗಳಿಸಿದೆ.ಅವರು ಎಷ್ಟೇ ಮಾತನಾಡಿದರೂ ಪ್ರಯೋಜನವಾಗುವುದಿಲ್ಲ ಎಂದು ಟೀಕಿಸಿದರು.

ಸಚಿವರಿಂದ ತೀಕ್ಷ್ಣ ಪ್ರತಿಕ್ರಿಯೆ: ಕರ್ನಾಟಕದಲ್ಲಿ ರಾಜಕೀಯ ಭೂಕಂಪವಾಗಲಿದೆ ಎಂಬ ಕೇಂದ್ರ ಸಚಿವ ಪ್ರಕಾಶ ಜಾವ್ಡೇಕರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಾತಿಗೆ ದನಿಗೂಡಿಸಿರುವ ಸಮ್ಮಿಶ್ರ ಸರ್ಕಾರದ ಸಚಿವರು, ತೀವ್ರ ಆಕ್ರೋಶ ವ್ಯಕ್ತಪಡಿಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಸಂಪುಟ ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ಹತಾಶೆಯಿಂದ ಅಂತಹ ಹೇಳಿಕೆ ನೀಡುತ್ತಿದ್ದಾರೆ. ಅವರ ಈ ಹೇಳಿಕೆಯಿಂದ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.

ರೇಷ್ಮೆ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮೈತ್ರಿ ಸರ್ಕಾರ ಎಂದಿಗೂ ಅಸ್ಥಿರವಾಗುವುದಿಲ್ಲ. ಸರ್ಕಾರ ರಚನೆಯಾದಾಗಿನಿಂದಲೂ ಅದನ್ನು ಬೀಳಿಸುವ ಕುದುರೆ ವ್ಯಾಪಾರ ಗುಟ್ಟಾಗಿ ನಡೆಯುತ್ತಲೇ ಇದೆ ಎಂದು ಟೀಕಿಸಿದರು.

ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಮಾತನಾಡಿ, ಯಾವ ಭೂಕಂಪವೂ ಆಗುವುದಿಲ್ಲ. ಕಳೆದ ಆರು ತಿಂಗಳಿನಿಂದ ಇದೇ ರಾಗ ಹಾಡುತ್ತಿದ್ದಾರೆ. ಕುಮಾರಸ್ವಾಮಿ ಸರ್ಕಾರ ಸ್ಥಿರವಾಗಿರುತ್ತದೆ ಎಂದು ಸಮರ್ಥಿಸಿಕೊಂಡರು.

ಸಚಿವ ಪ್ರಿಯಾಂಕ ಖರ್ಗೆ ಮಾತನಾಡಿ, ಇನ್ನು ಸ್ವಲ್ಪ ದಿನ ಕಾದರೆ ಅವರಲ್ಲೇ ಭೂಕಂಪವಾಗುತ್ತದೆ ಎಂದು ಕೇಂದ್ರ ಸಚಿವರ ಮಾತಿಗೆ ತಿರುಗೇಟು ನೀಡಿದರು.ಯಡಿಯೂರಪ್ಪ ಅವರು 6 ತಿಂಗಳಿನಿಂದ ಇದನ್ನೇ ಹೇಳುತ್ತಿದ್ದಾರೆ.ಆದರೆ ಏನೂ ಆಗಲಿಲ್ಲ.ಉತ್ತರ ಭಾರತದಲ್ಲಿ ಸೋಲಿನ ಭೀತಿ ಅವರನ್ನು ಕಾಡುತ್ತಿದೆ.ಅದಕ್ಕಾಗಿ ವಿಷಯಾಂತರ ಮಾಡುತ್ತಿದ್ದಾರೆ.ಕರ್ನಾಟಕದಲ್ಲಿ ರಾಜಕೀಯ ಭೂಕಂಪ ಎಂದೆಲ್ಲ ಹೇಳಹೊರಟ್ಟಿದ್ದಾರೆ ಎಂದರು.
ಸಚಿವ ಆರ್.ವಿ.ದೇಶಪಾಂಡೆ ಮಾತನಾಡಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ಹಲವು ತಂತ್ರಗಳನ್ನು ಮಾಡಿ ವಿಫಲರಾಗಿದ್ದಾರೆ. ಹಾಗಾಗಿ ಹತಾಶೆಯಿಂದ ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ ಸ್ಥಿರವಾಗಿ ಮುಂದುವರೆಯುತ್ತದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ