ಇಂದು ಬಿಬಿಎಂಪಿ ಉಪಮೇಯರ್​, ಸ್ಥಾಯಿಸಮಿತಿ ಸದಸ್ಯರ ಚುನಾವಣೆ; ಜೆಡಿಎಸ್​ನ ಭದ್ರೇಗೌಡ ನಾಮಪತ್ರ ಸಲ್ಲಿಕೆ

ಬೆಂಗಳೂರುಬಿಬಿಎಂಪಿಯಲ್ಲಿ ಇಂದು ಉಪಮೇಯರ್ ಮತ್ತು ಸ್ಥಾಯಿಸಮಿತಿ ಸದಸ್ಯರ ಸ್ಥಾನದ ಚುನಾವಣೆ ನಡೆಯಲಿದ್ದು, ಜೆಡಿಎಸ್​ನ ಉಪಮೇಯರ್​ ಅಭ್ಯರ್ಥಿ ಭದ್ರೇಗೌಡ ಚುನಾವಣಾಧಿಕಾರಿ ರಂದೀಪ್ ಡಿ. ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸ್ಥಾಯಿ ಸಮಿತಿ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಗೊಂದಲ ಉಂಟಾಗಿದ್ದು, ಕಾಂಗ್ರೆಸ್ ಮುಖಂಡರ ನಿರ್ಣಯದಂತೆ 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್‌ಗೆ 5, ಜೆಡಿಎಸ್‌ಗೆ 4 ಹಾಗೂ ಪಕ್ಷೇತರ ಸದಸ್ಯರಿಗೆ 3 ಸ್ಥಾಯಿ ಸಮಿತಿ ಹಂಚಲಾಗುವುದು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ.

ಅಪೀಲು ಸ್ಥಾಯಿ ಸಮಿತಿ, ಮಾರುಕಟ್ಟೆ ಸ್ಥಾಯಿ ಸಮಿತಿ, ನಗರ ಯೋಜನೆ ಸ್ಥಾಯಿ ಸಮಿತಿ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಮತ್ತು ಪಕ್ಷೇತರರಿಗೆ ಹಂಚಿಕೆಯಾಗಲಿವೆ.

ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ವಾರ್ಡ್‌ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ, ಶಿಕ್ಷಣ ಸ್ಥಾಯಿ ಸಮಿತಿ ಜೆಡಿಎಸ್​ ಪಾಲಾಗಲಿದೆ. ಬಿಬಿಎಂಪಿಯಲ್ಲಿ ನಾಲ್ಕನೇ ಅವಧಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯಲು ಸಹಕರಿಸಿದ 6 ಪಕ್ಷೇತರರಲ್ಲಿ ಮೂವರಿಗೆ ಅಧ್ಯಕ್ಷ ಸ್ಥಾನ ಸಿಗಲಿದೆ. ಪಕ್ಷೇತರರಾದ ಚಂದ್ರಪ್ಪರೆಡ್ಡಿ, ಲಕ್ಷ್ಮೀನಾರಾಯಣ್ ಮತ್ತು ಮುಜಾಹಿದ್‌ಪಾಷಾಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತ ಎನ್ನಲಾಗಿದೆ. ಉಳಿದಂತೆ ಆನಂದ್, ಏಳುಮಲೈ, ಗಾಯತ್ರಿ ಅವರಿಗೆ ಮುಂದಿನ ವರ್ಷ ಅವಕಾಶ ನೀಡುವುದಾಗಿ ಮುಖಂಡರು ಭರವಸೆ ನೀಡಿದ್ದಾರೆ.

ಜೆಡಿಎಸ್​ನಿಂದ ಉಪಮೇಯರ್ ಸ್ಥಾನದ ಅಭ್ಯರ್ಥಿಯಾಗಿ ಭದ್ರೇಗೌಡ ಕಣಕ್ಕೆ ಇಳಿದಿದ್ದು,  ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೇವೇಗೌಡರು ಹಾಗೂ ಸಿಎಂ ಕುಮಾರಸ್ವಾಮಿಯವರು, ಶಾಸಕರು ಎಲ್ಲರೂ ಸೇರಿ ನನ್ನನ್ನು ಅಭ್ಯರ್ಥಿ ಎಂದು ನಿರ್ಧರಿಸಿದ್ದಾರೆ. ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಈ ಬಗ್ಗೆ ನಾನು ನನ್ನ ಆಕಾಂಕ್ಷೆಯನ್ನು ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ನಾನು ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದಿದ್ದಾರೆ.

ನಮ್ಮಲ್ಲಿ ಒಗ್ಗಟ್ಟಿದೆ:
ನಿನ್ನೆ ಸಂಜೆಯೇ ಎಲ್ಲಾ ತೀರ್ಮಾನ ಆಗಿದೆ. ಉಪ ಮೇಯರ್ ಸ್ಥಾನ ಜೆಡಿಎಸ್ ಗೆ ನೀಡಲಾಗಿದೆ. ಕಾಂಗ್ರೆಸ್​ಗೆ 4 ಸ್ಥಾಯಿ ಸಮಿತಿ ಸ್ಥಾನ, ಜೆಡಿಎಸ್ ಗೆ 4 ಸ್ಥಾನಗಳಿವೆ.  ಬಿಜೆಪಿಯವರು ಕೂಡ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸೋಲುತ್ತೇವೆ ಎಂದು ಗೊತ್ತಿದ್ದರೂ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ನಮ್ಮಲ್ಲಿ ಒಗ್ಗಟ್ಟಿದೆ. ಅದೇ ರೀತಿ ಜೆಡಿಎಸ್ ನಲ್ಲೂ ಒಗ್ಗಟ್ಟಿನಿಂದ ಇದ್ದಾರೆ. ಬಿಜೆಪಿಯವರು ಆಪರೇಷನ್ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬಿಜೆಪಿ ನಾಯಕ ಆರ್. ಅಶೋಕ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಉಪಮೇಯರ್ ಆಯ್ಕೆ ವಿಚಾರವಾಗಿ ಇನ್ನೂ ಅಂತಿಮವಾಗಿಲ್ಲ. ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕೋ ಬೇಡವೋ ಎಂದು ಸಭೆಯಲ್ಲಿ ತೀರ್ಮಾನವಾಗಲಿದೆ. ಒಂದು ಗಂಟೆ ಒಳಗೆ ಸಭೆ ಕರೆದು ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.

ಬಿಬಿಎಂಪಿಯಲ್ಲಿನ ಪಕ್ಷಗಳ ಬಲಾಬಲ

ಬಿಜೆಪಿ
ಕಾರ್ಪೊರೇಟರ್​​ಗಳು- 100
ಎಂಎಲ್​ಎ- 11
ಎಂಎಲ್​ಸಿ- 6
ಎಂಪಿ- 2
ಎಂಪಿ (ರಾಜ್ಯಸಭಾ)- 2
ಎಂಎಲ್​ಸಿ (ಸ್ವತಂತ್ರ)- 1
ಬಿಜೆಪಿ ಒಟ್ಟು-122

ಕಾಂಗ್ರೆಸ್
ಕಾರ್ಪೊರೇಟರ್​​​ಗಳು- 75
ಎಂಎಲ್​ಎ- 15
ಎಂಎಲ್​ಸಿ- 10
ಎಂಪಿ- 2
ಎಂಪಿ (ರಾಜ್ಯಸಭಾ)- 6
ಕಾಂಗ್ರೆಸ್ಒಟ್ಟು-108

ಜೆಡಿಎಸ್
ಕಾರ್ಪೊರೇಟರ್​- 14
ಎಂಎಲ್​ಎ- 2
ಎಂಎಲ್​ಸಿ- 5
ಎಂಪಿ- 0
ಎಂಪಿ (ರಾಜ್ಯಸಭಾ​)- 1

ಜೆಡಿಎಸ್ಒಟ್ಟು-22

ಇಂಡಿಪೆಂಡೆಂಟ್​-8
ಬಿಬಿಎಂಪಿಯಲ್ಲಿರುವ ಒಟ್ಟು ಮತಗಳು– 260

ಕಾಂಗ್ರೆಸ್ + ಜೆಡಿಎಸ್ + ಸ್ವತಂತ್ರ ಸದಸ್ಯರು  ಒಟ್ಟು– 138
ಬಿಜೆಪಿ – 122

ಮ್ಯಾಜಿಕ್ನಂಬರ್ -131

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ