ಆಪರೇಷನ್ ಕಮಲದ ಬಗ್ಗೆ ನಾವು ಕಣ್ಣು ಮುಚ್ಚಿ ಕುಳಿತಿಲ್ಲ, ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಡಿ.4- ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲದ ಬಗ್ಗೆ ನಾವು ಕಣ್ಮುಚ್ಚಿ ಕುಳಿತಿಲ್ಲ. ಬೆಂಕಿ ಇಲ್ಲದೆಯೇ ಹೊಗೆಯಾಡುತ್ತದೆಯೇ ?ಸರ್ಕಾರ ಅಸ್ಥಿರಗೊಳಿಸಲು ಯಾರ್ಯಾರು ಏನೇನು ನಡೆಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಗುಡುಗಿದರು.

ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಟೀಮ್‍ಗಳು ಚಟುವಟಿಕೆಗಳಲ್ಲಿ ತೊಡಗಿವೆ. ಬಿಜೆಪಿಯ ಒಂದು ಟೀಮ್‍ಗೆ ಏನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಮತ್ತೊಂದು ಟೀಮ್ ಆಪರೇಷನ್ ಕಮಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ.ಜನಾರ್ಧನ್ ರೆಡ್ಡಿ ಅವರು ಯಾರನ್ನು ಭೇಟಿ ಮಾಡಲು ಬ್ರಿಗೇಡ್ ಟವರ್ ಜಿಂದಾಲ್‍ಗೆ ಹೋಗಿದ್ದರು ಎಂಬುದೆಲ್ಲಾ ಗೊತ್ತು. ಶ್ರೀರಾಮುಲು ಅಣ್ಣನವರ ಪಿಎ ಯಾರೊಂದಿಗೆ ಮಾತನಾಡಿದ್ದಾರೆ, ಯಾರನ್ನು ಸಂಪರ್ಕಿಸಿದ್ದಾರೆ ಎಂಬುದೂ ಗೊತ್ತಿದೆ ಎಂದರು.

ದುಬೈ ಉದ್ಯಮಿಯೊಂದಿಗೆ ಮಾತನಾಡಿರುವುದು ಶ್ರೀರಾಮುಲು ಪಿಎ ಅಲ್ಲ ಎಂದ ಮೇಲೆ ಅವರನ್ನು ಏಕೆ ಜತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಡಿಕೆಶಿ ಪ್ರಶ್ನಿಸಿದರು.

ಏನೂ ನಡದೇ ಇಲ್ಲ. ಆಡಿಯೋ ನಕಲಿ ಎಂದು ಹೇಳುವ ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಕೋಟಾ ಶ್ರೀನಿವಾಸ್‍ಪೂಜಾರಿ ಅವರಿಗೆ ಆಪರೇಷನ್ ಕಮಲ ನಡೆಯುತ್ತಿರುವ ಬಗ್ಗೆ ಮಾಹಿತಿಯೇ ಇಲ್ಲ. ಇನ್ನೊಂದು ಟೀಮ್ ಆ ಕೆಲಸ ಮಾಡುತ್ತಿದೆ.ಅವರು ನೂರು ಜನರೊಂದಿಗೆ ಮಾತನಾಡಲಿ ಏನೂ ಆಗುವುದಿಲ್ಲ. ನಮ್ಮವರ್ಯಾರೂ ಅವರೊಂದಿಗೆ ಹೋಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಹಂಪಿ ಉತ್ಸವ ಬಗ್ಗೆ ಅಧಿಕಾರಿಗಳಿಂದ ವರದಿ:
ಹಂಪಿ ಉತ್ಸವವನ್ನು ಭಿಕ್ಷೆ ಎತ್ತಿ ನಡೆಸುತ್ತೇವೆ ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದ್ದಾರೆ. ಎಕ್ಸ್‍ಟ್ರಾಕ್ಷನ್ (ವಸೂಲಿ) ಮಾಡುವುದರಲ್ಲಿ ಅವರು ಎತ್ತಿದ ಕೈ ಎನ್ನುವ ಮೂಲಕ ಟಾಂಗ್ ನೀಡಿದರು.

ಉತ್ಸವ ನಡೆಸುವುದು ಎಂದರೆ ಸುಲಭದ ಕೆಲಸವಲ್ಲ. ಏಕಾಏಕಿ ಮಾಡುವುದಲ್ಲ, ಎಷ್ಟು ದಿನ, ಯಾವಾಗ ನಡೆಸಬೇಕು, ಯಾರನ್ನು ಆಹ್ವಾನಿಸಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದೇವೆ. ಇದರಲ್ಲಿ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ಧರ್ಮ ರಾಜಕಾರಣದ ಅಗತ್ಯವೂ ಇಲ್ಲ ಎಂದರು.
ಆ ಭಾಗದ ತಾಲ್ಲೂಕುಗಳಲ್ಲಿ ಬರ ಇರುವುದರಿಂದ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ